Thursday, October 13, 2011

ಕಾಡುವ ಕಹಿ ನೆನಪುಗಳು

ಓಡಿ ಹೋಗಲೇ ನಾನು?
ಕಹಿ ನೆನಪು ಗಳಿಂದ ದೂರ ದೂರ
ಬೆನ್ನಟ್ಟಿ ಹಿಂಬಾಲಿಸಿ , ಘೀಳಿಟ್ಟು
ಮಾಡುವವಿವು ಕೂರಂಬುಗಳಿಂದ ಗದಾಪ್ರಹಾರ

ಏನು ಮಾಡಲಿ ನಾನು ?
ನನ್ನ ಮನಸ್ಸಿದು ಮೃದುಭಾಷಿಣಿ
ಇದಕ್ಕಿಲ್ಲ ರಕ್ಷಣೆ ಕೋಟೆ ಕೊತ್ತಳಗಳಿಂದ
ಇರುವುದೊಂದು ಬೇಲಿ , ಅದೂ ಪಾಳು

ಮರೆತು ಬಿಡಲೇ ನಾನು ಎಲ್ಲ ?
ಮಾಡಬೇಕಾಗಿದೆ ನಾನು ಜೋಪಾನ
ಈ ನನ್ನ ಭಾವವನ್ನು
ಅದರಲ್ಲಿರುವ ಪಸೆ ಆರಿ ಹೋಗುವ ಮುನ್ನ

Saturday, July 16, 2011

ಎಂಥಾ ಗೋಳಾಟ

ಶಾಲಾ ದಿನಗಳು ಆವು .. ರಜಾ ದಿನಗಳಲ್ಲಿ ಊರಿಗೆ ಹೋಗೋ ಸಡಗರ ಹೇಳತೀರದು ...
ಊರಿಗೆ ಹೋದಮೇಲೆ ಕೇಳ್ತೀರಾ.. ಸಂಜೆವರೆಗೂ ಆಟ .. ಆಮೇಲೆ ಶ್ಲೋಕ ... ಕಥೆ .. ಹಾಡು .. ಹಸೆ ಇತ್ಯಾದಿ..
ಹೀಗೆ ನಮ್ಮಕ್ಕಂದಿರು ಹೇಳಿಕೊಟ್ಟಂತ ಒಂದು ಹಾಡು.. ಆಗಲೇ ಚನ್ನಾಗಿ ಕಂಠಪಾಠ ಮಾಡಿದ್ದೆ..
ಸ್ಕೂಲಿನಲ್ಲಿ ಅಂತು ಇದು "world famous" ಆಗಿತ್ತು ... "once more once more" ಅಂತ ಹಾಡಿಸುತ್ತಿದ್ದರು.
ಇದನ್ನು ನಾನು ಆಗಿನ ಕಾಲಕ್ಕೆ ಭದ್ರಾವತಿಯ ಆಕಾಶವಾಣಿ ಕೇಂದ್ರದಲ್ಲೂ ಹಾಡಿದ್ದೆ...
ಹೀಗೆ ಕೂತಾಗ ಹಾಡು ಜ್ಞಾಪಕಕ್ಕೆ ಬಂತು.. ಅಲ್ಲಲ್ಲಿ ಮರೆತು ಹೋಗಿತ್ತು
ಅಪ್ಪ ಹಾಗು ಅತ್ತೆಯ ತಲೆ ತಿಂದು ಇಲ್ಲಿ ಬರೆದಿದ್ದೀನಿ ..
ಇದನ್ನು ಬರೆದವರು ಯಾರು ಅಂತ ಗೊತ್ತಿಲ್ಲ .. ಗೊತ್ತಿದ್ದರೆ ತಿಳಿಸಿ ..


"
ಎಂಥಾ ಗೋಳಾಟ ಇದು ಎಂಥಾ ಗೋಳಾಟ
ಶನಿವಾರ ಮುಂಜಾನೆ ಶಾಲೆಗೆ ಹೋಗೋದು
ಎಂಥ ಗೋಳಾಟ ಇದು ಎಂಥಾ ಗೋಳಾಟ

ಕಣ್ಣ ತುಂಬಾ ನಿದ್ದೆ ಇದ್ದರು , ಆರಕೆ ನಾನೆದ್ದೆ
ಮೋರೆ ತೊಳೆಯಲು ಬಚ್ಚಲಿಗೋದೆ, ಅಲ್ಲೇ ಜಾರಿ ಬಿದ್ದೆ , ಅಲ್ಲೇ ಜಾರಿ ಬಿದ್ದೆ
ಹಾಯ್ ಹಾಯ್ ಹಾಯ್ , ದೇವರೇ ಕಾಯ್
ಮೈ ಕೈ ಎಲ್ಲ ಗಾಯ್ ಗಾಯ್ ಗಾಯ್
ತಂಬಿಗೆ ಬಿದ್ದು ತಾಯಿಯು ಬಂದು
ಉದ್ಧಾರಾದೆ ನಾನು....
ಎಂಥಾ ಗೋಳಾಟ ......

ಬಿಸಿ ಬಿಸಿ ಉಪ್ಪಿಟ್ ಮುಂದೆ ಬಂದರು
ಹೇಗೋ ನಾ ತಿಂದೆ
ಗಬ ಗಬ ತಿನ್ನಲು ಗಂಟಲಿಗೇರಿ
ಕೂತಿತು ಕರಿಬೇವು ಕಡ್ಡಿ ,ಕೂತಿತು ಕರಿಬೇವು ಕಡ್ಡಿ
ಛೆ ಛೆ ಏನು ಅಸಹ್ಯ .. ಮೈ ಕೈ ಎಲ್ಲ ಮುಸುರೆ ಅಸಹ್ಯ್
ಅಣ್ಣನು ಬಂದು ಗುದ್ದಲು ನಂಗೆ .. ಬೇಡೆಂದು ಒಳಗೋದೆ ನಾನು ....
ಎಂಥಾ ಗೋಳಾಟ ......

ಸಾಡೆ ಸಾತು ಆಗೆಬಿಟ್ಟಿತು .. ಶಾಲೆಗೆ ಹೊತ್ತಾಯ್ತು ..
ಗಡಿಬಿಡಿಯಿಂದ ಹೊರಟೆ ಬಿಟ್ಟೆ .. ಪೆನ್ನೇ ಮರೆತುಹೋಯ್ತು .. ಪೆನ್ನೇ ಮರೆತುಹೋಯ್ತು ..
ಟ್ರಿನ್ ಟ್ರಿನ್ ಟ್ರಿನ್, ಪೊಂ ಪೊಂ ಪೊಂ
ಸೈಕಲ್ ಮೋಟರ್ ಸೊಯ್ ಸೊಯ್ ಸೊಯ್
ಅತ್ತಿಂದಿತ್ತ ಓಡೋದರ ಒಳಗೆ ಕಿತ್ತಿತು ಚಪ್ಪಲ್ ಬಾರು
ಎಂಥಾ ಗೋಳಾಟ ......

ಅಂತು ಶಾಲೆಗೆ ಬಂದೆ .. ಟೀಚರ್ ಸಾರಿ ಎಂದೆ
ಓದುವ ಸರದಿ ಬಂದಿತು ಎಂದು, ಬ್ಯಾಗಿನ ಬಾಯ್ ತೆರೆದೇ .. ಬ್ಯಾಗಿನ ಬಾಯ್ ತೆರೆದೇ ..
ಛಿ . .. ಛಿ .... ಛಿ .... ಏನು ಅಸಹ್ಯ...
ಬ್ಯಾಗಿನ ತುಂಬಾ ತುಂಬಿದೆಯೂ
ತಂಗಿಯ ಕುಂಚಿಗೆ .. ತಮ್ಮನ ಟೊಪ್ಪಿಗೆ ....
ನನ್ನ ಚಪ್ಪಲ್ ಬಾರು .....
ಎಂಥಾ ಗೋಳಾಟ ......

"

ಅಂದಹಾಗೆ ಈ ಹಾಡನ್ನು ಜಾನಿ ವಾಲ್ಕರ್ ರವರ "Tel Malish " ಚಿತ್ರದ "ಸರ್ ಜೋ ತೇರ ಚಕ್ರಯೇ " ಹಾಡಿನ ಧಾಟಿಯಲ್ಲಿ ಹಾಡಬೇಕು

Friday, June 10, 2011

ದೊಡ್ಡ ಸಂಪಿಗೆ

ಬಿಳಿಗಿರಿ ವನಕ್ಕೆ ಹೊರಟಾಗ.. ನನಗೂ ಬಹಳ ಕುತೂಹಲ ಇತ್ತು..
ಬಾಲಣ್ಣ ಹೇಳಿದ್ರು.. ದೊಡ್ಡ ಸಂಪಿಗೆ... ಇದು ನೀವು , ಒಮ್ಮೆ ನೋಡಲೇ ಬೇಕಾದ ಸಂಗತಿ ಅಂತ..

ತುಂಬಾ ದೊಡ್ಡ ಮರ ಅಂತೆ.. ಸಾವಿರಾರು ವರ್ಷ ಹಳೆಯದಂತೆ..
ಜಮದಗ್ನಿ ತಪಸ್ಸು ಮಾಡಿದ್ದನಂತೆ...
ಮುಗಿಲು ಮುಟ್ಟುವ ಹಾಗೆ ಮರ ಇದೆಯಂತೆ..
ಮರದಲ್ಲಿ ೩ ತರಹದ ಹೂವುಗಳು ಬಿಡ್ತಾವಂತೆ...
ಅಂತೆ ಕಂತೆ ಗಳ ಸರಮಾಲೆಗಳು ತಲೆಯಲ್ಲಿ ಇದ್ದವು...



ನಿಂತೆ ಮರದ ಮುಂದೆ.. ಅಲ್ಲ... ಅಲ್ಲ.. ಹೆಮ್ಮರದ ಮುಂದೆ..
ಅಬ್ಬಾ .. ಏನು ಅಗಾಧ, ಎಷ್ಟು ಎತ್ತರ .......ಭಾರೀ ವಿಸ್ತೀರ್ಣ...
ಸರಿ ಸುಮಾರು ಇಪ್ಪತ್ತು ಆಳುಗಳು ಬೇಕು... ಮರವನ್ನು ಸುತ್ತುವರಿಯಲಿಕ್ಕೆ..
ಮರದ ಕೆಳಗೆ ಸಣ್ಣ ಬಿಂದುವಾದೆ ... ಕುಬ್ಜನಾದೆ ... ಕಳೆದುಹೋದೆ ...

ಸೋಲಿಗರು ಇಂದಿಗೂ ಮರವನ್ನು ಪೂಜಿಸುತ್ತಾರೆ..
ಸೋಲಿಗರ ಆರಾಧ್ಯ ದೈವ ದೊಡ್ಡ ಸಂಪಿಗೆ..
ಗೊರುಕನ ಹಾಡು ಶುರುವಾಗುವುದೇ ದೊಡ್ಡ ಸಂಪಿಗೆಯ ಸ್ತುತಿಯಿಂದ ..
ಮರದ ಕೆಳೆಗೆ ಹಲವಾರು ಲಿಂಗಗಳು .. ತ್ರಿಶೂಲಗಳು ಇವೆ..
ಪೂಜೆ ಪುನಸ್ಕಾರಗಳು ಇಂದಿಗೂ ನಡೆಯುತ್ತವೆ..


ಅಲ್ಲಿಯೇ ಪಕ್ಕದಲ್ಲಿ ಭಾರ್ಗವಿ... ಜುಳು ಜುಳು ಎಂದು ಮಂದಗಮನೆ ಯಾಗಿ ಹರಿಯುತ್ತಿದ್ದಾಳೆ..
ಅಕ್ಕ, ಪಕ್ಕ ಪಕ್ಷಿಗಳ ಕಲರವ, ಮನಸ್ಸಿಗೆ ಮುದ ಕೊಟ್ಟಿತು ...
ಮನಸ್ಸು ನಿಸರ್ಗದ ಸೃಷ್ಟಿಗೆ ಒಂದು ದೊಡ್ಡ ಥ್ಯಾಂಕ್ಸ್ ಹೇಳುತ್ತಾ... ಹಾಡನ್ನು ಗುನುಗುನಿಸುತ್ತ ....ಅಲ್ಲಿಂದ ಹೊರಟೆ .



"ಸಂಪಿಗೆ ಮರದ ಚಿಗುರೆಲೆ ನಡುವೆ ಕೋಗಿಲೆ ಹಾಡಿತ್ತು.......
ಅದ ಕೇಳಿ ನಾ ಮೈ ಮರೆತೇ...
ಸ್ವರ ಒಂದು ಆಗಲೇ ಕಲಿತೆ...
ನಾ ಹಾಡಿದೆ.. ಈ ಕವಿತೆ.. ನಾ ಹಾಡಿದೆ ಈ ಕವಿತೆ..... "

ಕೆಲವು ಸಂಗತಿಗಳು:
ದೊಡ್ದಸಂಪಿಗೆ ಮರವು ಬಿಳಿಗಿರಿ ರಂಗನ ಬೆಟ್ಟ ಹಾಗು ಕೆ. ಗುಡಿ (ಕ್ಯಾತ ದೇವನ ಗುಡಿ) ಮಾರ್ಗ ಮಧ್ಯದಲ್ಲಿ ಬರುತ್ತದೆ. ಇಲ್ಲಿಗೆ ತಲುಪಲು ಅರಣ್ಯ ಇಲಾಖೆಯ ಅನುಮತಿ ಅತ್ಯಗತ್ಯ.
ATREE, ಬೆಂಗಳೂರು ; ಇವರ ಇತ್ತೀಚಿನ ಸಂಶೋಧನೆಯ ಪ್ರಕಾರ ಮರವು ಸುಮಾರು ೨೭೦೦ ವರುಷಗಳಷ್ಟು ಹಳೆಯದು ಎಂದು ಕಂಡು ಹಿಡಿದ್ದಾರೆ
ಮರವು ಸುಮಾರು ೩೪ ಮೀಟರ್ ನಷ್ಟು ಎತ್ತರ ಹಾಗು ೨೦ ಮೀಟರ್ ನಷ್ಟು ಪರಿಧಿ ಹೊಂದಿದೆ. (ಆಧಾರ : ಇಂಟರ್ನೆಟ್ )

Tuesday, May 24, 2011

ಭಂಡನಾಗಿರಬೇಕು............

ಭಂಡನಾಗಿರಬೇಕು ಜಗದೊಳಗೆ
ಇರಬೇಕು ಎಮ್ಮೆ ಚರ್ಮ
ಇದ್ದರೆ ಸಾಕು ಕರ್ಚೀಫುಗಳು
ಮುಖವನ್ನು ಒರೆಸಿಕೊಳ್ಳಲು
ಭಾವನೆಗಳು ಯಾರಿಗೂ ಬೇಕಾಗಿಲ್ಲ
ಕೇಳೋದಂತು ಇಲ್ಲವೇ ಇಲ್ಲ
ಕಳೆದು ಹೋಗಿದೆ ಅಂತಃಕರಣ
ಸತ್ತುಹೋಗಿದೆ ಮನಸ್ಸಾಕ್ಷಿ
...
ಭಂಡನಾಗಿರಬೇಕು ಜಗದೊಳಗೆ
ಜಗ "ಭಂಡ" ನಾದರೆ ಎಷ್ಟು ಚನ್ನ !!!!



ವಿ ಸು: ನನ್ನ ಪ್ರಥಮ ಪ್ರಯತ್ನ ... ಸುತ್ತಲೂ ನಡೆಯುತ್ತ ಇರುವುದನ್ನ ನೋಡಿ ಬರೆದಿದ್ದು .. ನೋಡಿ , ತಿದ್ದಿ , ತೀಡಿ, ಪ್ರೋತ್ಸಾಹಿಸಿ .....

Saturday, April 30, 2011

ಬಾಳ್ ಕನ್ನಡ ತಾಯ್

ಅಂದು ನವಂಬರ್ ೧ , ಶಿವು ಇನ್ನು ಮುಂದೆ ಪ್ರತಿ ವರ್ಷದ ರಾಜ್ಯೋತ್ಸವದ ದಿನದಂದು ಮನೆಯ ಮೇಲೆ ಬಾವುಟ ಹಾರಿಸಬೇಕೆಂದು ತೀರ್ಮಾನಿಸಿದ್ದ, ಆಗಿನ್ನೂ ಮದುವೆಯ ಹೊಸತು! ಗೌರಿ ಗಂಡನ ಕನ್ನಡಾಭಿಮಾನವನ್ನು ಕಂಡು ಹೆಮ್ಮೆ ಪಟ್ಟಿದ್ದಳು, ಇಬ್ಬರೂ ಸೇರಿ ಒಂದು ದೊಡ್ಡ ಗಳಕ್ಕೆಬಾವುಟ ಕಟ್ಟಿ, ಹಾರಿಸಿ ಸಿಹಿ ಹಂಚಿ ಸಂತೋಷ ಪಟ್ಟಿದ್ದರು. ವಿವಿಧ ಭಾರತಿಯಲ್ಲಿ " ಏರಿಸಿ ಹಾರಿಸಿ ಕನ್ನಡದ ಬಾವುಟ ......." ಮೊಳಗುತ್ತಿತ್ತು .
............... ............... ...................
ಅಂದು ಪ್ರಣವನ ಶಾಲೆಯಲ್ಲಿ ಒಂದು ಕಾರ್ಯಕ್ರಮ, ಬೇಗ ಎದ್ದು ಧಾವಂತ ಮಾಡಿಕೊಂಡು ಇಬ್ಬರೂ ಶಾಲೆಗೆ ಹೊರಟರು. ಶಹರದಲ್ಲಿ ಇಂಗ್ಲಿಷ್ ಶಾಲೆಗಳ ಭರಾಟೆ, ಹಳ್ಳಿಯಲ್ಲಿ ಈ ಖಾಸಗಿ ಶಾಲೆ ಶುರುವಾಗಿ ಇನ್ನೂ ಹೊಸತು, ಕಾರ್ಯಕ್ರಮ ಭಾರಿ ಚನ್ನಾಗಿಯೇ ನಡೆದಿತ್ತು, ಶಾಲೆಯ ಟ್ರಸ್ಟಿಗಳಲ್ಲಿ ಒಬ್ಬನಾದ ನಾಯ್ಡು ದಂಪತಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದ. ಶಾಲೆಯಲ್ಲಿ ಪ್ರಣವ ಗೌರಿ ಹೇಳಿಕೊಟ್ಟಂತೆ "ಏರಿಸಿ ಹಾರಿಸಿ ..........." ಗೀತೆಯನ್ನು ಅಚ್ಚುಕಟ್ಟಾಗಿ ಒಪ್ಪಿಸಿದ್ದ.
....................................................
ನಾಯ್ಡು ಆ ದಿನ ದೇಶಾವರಿ ನಗೆ ಬೀರುತ್ತ ಮನೆಗೆ ಬಂದ, "ಶಿವಣ್ಣ ನಾನು ಎಲೆಕ್ಷನ್ ಗೆ ನಿಂತಿದ್ದೇನೆ , ನಂಗೇ ನಿಮ್ದು ವೋಟು " ಹಿಂದೆ ಒಂದು ಭಾರಿ ದೊಡ್ಡ ಪಟಾಲಂ .. ಎದುರುಗಡೆ ಸುಪರ್ ಸ್ಟೋರ್ ನ ಮಾಲೀಕ ಜಾರ್ಜ್ ಹಾಗು ಹಿಂದುಗಡೆ ಬೀದಿಯ ಬಟ್ಟೆ ಅಂಗಡಿಯ ಮೆಹತ ಜೊತೆಗಿದ್ದರು. ಭಾರೀ ಅಬ್ಬರದ ಪ್ರಚಾರ , ಧೂಮ್ ಧಾಮ್ ಎಂದು ಎಲೆಕ್ಷನ್ ಮುಗಿದೇ ಹೋಯ್ತು, ನಾಯ್ಡು ಆರಿಸಿ ಬಂದದ್ದು ಆಯ್ತು.

ಶಾಲೆಯ ಮೈದಾನದಲ್ಲಿ ಆ ದಿನ ಸಂಭ್ರಮದ ಆಚರಣೆ!! ರಾಜ್ಯೋತ್ಸವದ್ದಾ ಅಥವಾ ನಾಯ್ಡುವಿನ ಗೆಲುವಿನ ಸಂಭ್ರಮದ ಆಚರಣೆಯೂ ಶಿವುವಿಗೆ ಗೊತ್ತಾಗಲಿಲ್ಲ. ನಮಗೆ ಅದರ ಉಸಾಬರಿ ಯಾಕೆ ಎಂದು ಶಿವಣ್ಣ ಹಾಗು ಗೌರಿ ಕಾರ್ಯಕ್ರಮಕ್ಕೆ ಗೈರು ! ನಾಯ್ಡುವಿನ ಭಾಷಣದಲ್ಲಿ ಕನ್ನಡದ ಕಗ್ಗೊಲೆ ಆಗುತ್ತಿತ್ತು. ಇಬ್ಬರೂ ಪ್ರಣವನೊಂದಿಗೆ, ಧ್ವಜ ಹಾರಿಸಿ ಒಳಗೆ ಬಂದು ಟಿವಿ ನೋಡುತ್ತ ಕುಳಿತರು. ಅಶ್ವತ್ಥ್ ಮತ್ತು ವೃಂದದಿಂದ "ಏರಿಸಿ ಹಾರಿಸಿ ......" ಸುಶ್ರಾವ್ಯವಾಗಿ ಕೇಳಿ ಬರುತ್ತಿತ್ತು .
............................................
ಹಳ್ಳಿಯು ಹೋಗಿ ಒಂದು ಯದ್ವಾತದ್ವ ಬೆಳೆದ ಬಡಾವಣೆ ಆಗಿತ್ತು, ಆ ದಿನ ಶಿವೂ ಗೊಣಗುತ್ತಿದ್ದ , ಮುದ್ದಾಗಿ ಇದ್ದ ಹೆಸರನ್ನು ತುಂಡಿಸಿದ್ದರು. ಬಡಾವಣೆಯ ಹೆಸರು " K D extension" ಅಂತ ಆಗಿತ್ತು , ಅನ್ಯಭಾಷಿಕರ ನಾಲಿಗೆ ಹೊರಳದೆ !! ಶಿವುಗೆ ಊರು
ಬೇಜಾರಾಗಿತ್ತು!! ಸುತ್ತಲೂ ವಾಹನಗಳ ಭರಾಟೆ ! ಸ್ವಲ್ಪಹೊತ್ತು ಮಾತಾದೋಣ ಅಂದ್ರೆ ಅಕ್ಕ ಪಕ್ಕದ ಮನೆಯವರು ಹೊರಗೆ ಬರೋದೇ ಇಲ್ಲ!! ಸುತ್ತಾಡಿ ಬರೋಣ ಅಂತ ಹೊರಟರೆ , ಪರಿಚಯಸ್ಥರು ಸಿಗೋದೆ ಕಡಿಮೆ !! ರಾಮಣ್ಣ , ಪಾಲಾಕ್ಷಪ್ಪ ಊರು ಬಿಟ್ಟು ತುಂಬಾ ದಿನ ಆಗಿತ್ತು.. ತನ್ನ ಮನೆಯಲ್ಲೇ ಶಿವೂ ಪರಕೀಯನಾಗಿದ್ದ.
.........................................
ಪ್ರಣವನಿಗೆ ದೊಡ್ಡ ಕೆಲಸ! ಕೈ ತುಂಬಾ ಸಂಬಳ .. ಇಲ್ಲೇ ಬಂದು ಇದ್ದುಬಿಡು ಎಂದು ಕರೆಯುತ್ತಿದ್ದ, ಕೊನೆಗೂ ಶಿವೂ , ಗೌರಿ ತೀರ್ಮಾನಿಸಿದರು .. ಹೋಗೋಣ ಎಂದು ! ಎಲ್ಲವನ್ನು ಖಾಲಿ ಮಾಡಿಕೊಂಡು !!
ಪ್ರಣವ ಎಲ್ಲವನ್ನು ಹೊರ ಗುತ್ತಿಗೆ ಕೊಟ್ಟು ಬಿಟ್ಟಿದ್ದ ... ಐದಾರು ಆಳುಗಳು ಬಂದು ಎಲ್ಲವನ್ನು ಲಾರಿ ಯಲ್ಲಿ ಹಾಕಿಕೊಂಡು ಭರ್... ಎಂದು ಹೋದರು..

ಆ ದಿನವೂ ನವೆಂಬರ್ ೧, ಅವತ್ತು ಶಿವು ಬಾವುಟ ಹಾರಿಸಲಿಲ್ಲ, ಪ್ರಣವನ ಕಾರಿನಲ್ಲಿ ಪಯಣ ಸಾಗುತ್ತಿತ್ತು ! ರೇಡಿಯೋ ನಲ್ಲಿ ಜಾಕಿಗಳದ್ದೆ ಭರಾಟೆ ! ಇಂಗ್ಲಿಷ್ ಮಿಶ್ರಿತ ಹರುಕು ಮುರುಕು ಕನ್ನಡದಲ್ಲಿ ಅವರ ಮಾತುಗಳು ನಾಗಲೋಟದಲ್ಲಿ ಸಾಗಿದ್ದವು!
ಜಾಕಿಯು ಉಲಿದಳು, " ಯು ಅರ್ ಲಿಸೆನಿಂಗ್ ಟು ಬಿಂದಾಸ್ ಚಾನಲ್ ! ಟುಡೇ ಕನ್ನಡ ರಾಜ್ಯೋತ್ಸವ.... ಈಗ ಕೇಳಿ..

ಏರಿಸಿ ... ಹಾರಿಸಿ.. ಕನ್ನಡದ ಬಾವುಟ.. "

Sunday, March 27, 2011

ಮ್ಯಾಚ್ ಫಿಕ್ಸಿಂಗ್

ಮುನ್ನುಡಿ : ಕ್ರಿಕೆಟ್ ಬಗ್ಗೆ ಬರೀತಾ ಇದ್ದೀನಿ ಅಂತ ಅಂದುಕೊಂಡ್ರ! ಖಂಡಿತ ಇಲ್ಲ.... ಒಂದು ಘಟನೆ ಮುಂದೆ ಇಡುತ್ತಿದ್ದೇನೆ .........

ಮನೆಯಲ್ಲಿ ಯಾಕೋ ಇವತ್ತು ಪಿರಿಪಿರಿ ತುಂಬಾ ಜಾಸ್ತಿ,
ಒಂದು ವಿಷಯಕ್ಕೆ ಅಪ್ಪ ಮತ್ತು ನನ್ನ ಮಧ್ಯ ವಾದ ವಿವಾದ ನಡೆದಿತ್ತು.

"ಅಲ್ಲ, ನನ್ನ ಮಾತು ನೀವು ಯಾಕೆ ಕೇಳೋಲ್ಲ ಅಂತೀನಿ,
ಮೊನ್ನೆ ತಾನೇ ಆಪರೇಷನ್ ಆಗಿದೆ, ನಾಡಿದ್ದು ಪೂಜೆ ಮಾಡಬೇಕು ಅಂತೀರಾ,
ಮೊದ್ಲೇ ಶುಗರ್ರು, ಬಿಪಿ ಜಾಸ್ತಿಯಾಗಿದೆ ಈ ಸಂದರ್ಭದಲ್ಲಿ ಇವೆಲ್ಲ ಬೇಕಿತ್ತಾ ಅಂತ......
ಪಾಂಕ್ತವಾಗಿ ಮಾಡೋದು ಏನು ಬೇಡ .. "

"ನೀನು ಸುಮ್ಮನೆ ಇರಯ್ಯ , ನಂಗೆ ತಿಳುವಳಿಕೆ ಹೇಳೋಕ್ಕೆ ಬರಬೇಡ,
ಕಳೆದ ೬೦ ವರ್ಷ ದಿಂದ ಮಾಡ್ತಾ ಬಂದಿದ್ದೀನಿ,
ಅದು ಹ್ಯಾಗೆ ಬಿಡೋಕೆ ಆಗತ್ತೆ , ನೀನೇನೋ ಸಣ್ಣದಾಗಿ ಮಾಡಿ ಮುಗಿಸು ಅಂತ ಇದ್ದೀಯ ..
ಅವೆಲ್ಲ ಆಗುಲ್ಲ ... ನಾನು ಮಾಡಿಯೇ ಸಿದ್ಧ .. ನೀನು ತೆಪ್ಪಗಿರು ..." ಅಂತ ಕಡ್ಡಿ ಮುರಿದ ಹಾಗೆ ಹೇಳಿ ಬಿಟ್ರು....

ಆಫೀಸ್ಗೆ ರಂಪ ಮಾಡ್ಕೊಂಡು ಹೊರಟೆ...
ಹೋಗ್ತಾ ಒಂದು ಯೋಚನೆ ಬಂತು ಕಣ್ಣಿನ ಡಾಕ್ಟರಗೆ ಫೋನಾಯಿಸಿದೆ ...
ಡಾಕ್ಟರ ನಿಭಾಯಿಸೋಣ ಬಿಡಿ .. ಏನೂ ಯೋಚನೆ ಮಾಡಬೇಡಿ ಅಂತ ಹೇಳಿದ್ಮೇಲೆ ಮನಸ್ಸು ಸ್ವಲ್ಪ ನಿರಾಳ ಆಯ್ತು.
ಆಫೀಸ್ ಮುಗಿಸಿ ಮನೆಗೆ ಬಂದೆ. ಅಪ್ಪ ಹಾಲಲ್ಲಿ ಕೂತಿದ್ರು,
ಬೆಳಗಿನ ಸಿಟ್ಟು ಇನ್ನೂ ಮುಖದಲ್ಲಿ ರಾರಾಜಿಸುತ್ತಿತ್ತು
ಯಜಮಾನತಿಗೆ ಒಂದು ಲೋಟ ನೀರು ತರ ಹೇಳಿ ಕುಳಿತೆ

"ಡಾಕ್ಟರ ಫೋನ್ ಮಾಡಿದ್ರು, ಬೆಳಿಗ್ಗೆ, ಆರೋಗ್ಯ ವಿಚಾರಿಸಿಕೊಂಡರು"
" ಹು.... ಏನಂದ್ರು "
"ಇನ್ನೊಂದು ವಾರ ಫುಲ್ ರೆಸ್ಟ್ ಅಂತೆ , ಹೆಚ್ಚಿಗೆ ಆಯಾಸ ಮಾಡ್ಕೊಕ್ಬೇಡಿ ಅಂದ್ರು"
" ಹು.... ಸರಿ "
"ಹೆಚ್ಚು ತ್ರಾಸು ಬೇಡಾಂತ.. "
"ಹು .... ಈಗ "
" ಸ್ವಲ್ಪ ಸಣ್ಣದಾಗಿ ಮಾಡಿ ಮುಗಿಸ್ತೀನಿ "
ಡಾಕ್ಟರಗೆ ಮನದಲ್ಲಿಯೇ ವಂದನೆ ಹೇಳಿ ಗಟಗಟನೆಂದು ನೀರು ಕುಡಿದೆ.

Sunday, March 20, 2011

ಕಗ್ಗಾಡಿನಲ್ಲೊಂದು ಕಲ್ಲು

ಯಥಾಪ್ರಕಾರ ವಾರ್ಷಿಕ "ಕಾಡಿನ" ತೀರ್ಥಯಾತ್ರೆಗೆ ಹೊರಟಾಗ,
ಬಾಲು ಈ ಬಾರಿ ನಿಮಗೆ ಒಂದು ಅಪರೂಪದ ಕಲ್ಲು ತೋರಿಸ್ತೀನಿ ಅಂತ ಅಂದ್ರು ,
ನಂಗೆ ತುಂಬಾ ಕುತೂಹಲ !!
ಹೋಗ್ತೀರೋದು ಕಗ್ಗಾಡಿಗೆ.. ಅಲ್ಲಿ ಈ ಅಸಾಮಿ ಏನು ತೋರಿಸ್ತಾರೋ ಏನೋ ಅಂತ !

ಬುರುಡೆ ಅರಣ್ಯದಿಂದ ಬೆಳಗ್ಗೆನೆ ಹೊರಟೆವು, ದಟ್ಟಾರಣ್ಯದ ದಾರಿ ಸವೆದು ಮೇಲೆಬಂದರೆ
ಅಲ್ಲೇ ಒಂದು ಬಿರ್ಲಾ ರವರ ಕಾಫಿ ಎಸ್ಟೇಟ್ ,
ಈ ಟಾಟಾ, ಬಿರ್ಲಾ ರವರು ಎಲ್ಲೆಲ್ಲೋ ಅಸ್ತಿ ಮಾಡಿ ಇಟ್ಟಿದ್ದಾರೆ ಮಾರಾಯ್ರೆ ,
ಎಸ್ಟೇಟ್ ದಾಟಿ ಹಾಗೆ ಮೇಲೆ ಬಂದರೆ ಸಿಗುವುದೇ ಹೊನ್ನಮೇಟಿ ಬೆಟ್ಟ.
ಏನಪ್ಪಾ ವಿಶೇಷ ಅಂದ್ರೆ, ಬೆಟ್ಟದ ಮೇಲೊಂದು ಏಕಶಿಲಾ ಕಲ್ಲು
ಕಲ್ಲನ್ನು ಜೋರಾಗಿ ಕುಟ್ಟಿದಾಗ ಹೊರ ಹೊಮ್ಮುತ್ತದೆ ಥರಾವರಿ ನಾದ ,
ನಿಸರ್ಗವೇ ಹಾಗೆ, ತನ್ನ ಗರ್ಭದಲ್ಲಿ ಎಷ್ಟೋ ಅಚ್ಚರಿಗಳನ್ನು ತುಂಬಿ ಕೊಂಡಿರುತ್ತದೆ ಅಲ್ವಾ?
ಇಲ್ಲಿ ನೋಡಿ , ದಟ್ಟಾರಣ್ಯ ಮಧ್ಯದಲ್ಲಿ ಒಂದು ನಿಸರ್ಗದ ವಿಸ್ಮಯ ,
ಹಾಗೆ ನೋಡಿದರೆ ಸುತ್ತ ಮುತ್ತಲೂ ಹಲವಾರು ಕಲ್ಲುಗಳಿವೆ , ಅವುಗಳಿಗೆ ಇಲ್ಲ ಈ ಭಾಗ್ಯ .

ಸೋಲಿಗರು ಈ ಕಲ್ಲಿನ್ನಲ್ಲಿ ಚಿನ್ನ ಇರುವುದೆಂದು ನಂಬಿರುತ್ತಾರೆ . ಸ್ಥಳ ಪುರಾಣದ ಪ್ರಕಾರ ಬಿಳಿಗಿರಿ ರಂಗನಾಥ ಸ್ವಾಮಿಯು ಮೆಟ್ಟಿದ್ದ ನೆಲವಾದ್ದರಿಂದ "ಹೊನ್ನ" "ಮೆಟ್ಟಿ" ಅಥವಾ "ಮೇಟಿ" ಎಂಬ ಹೆಸರು ಬಂದಿದೆ.
ಕಲ್ಲಿನ ಬಗ್ಗೆ ಯೋಚಿಸುತ್ತಿರುವಾಗ ,
ಹಂಪಿಯ ವಿಜಯ ವಿಠಲ ದೇವಸ್ಥಾನದ "ಸರಿಗಮಪ" ಕಂಬಗಳು ನೆನಪಿಗೆ ಬರುತ್ತವೆ
ಕಲ್ಲಿಗೆ ಹೇಗೆ ಬಂತು ಈ ಗುಣ ಎಂದು ಅಂತರ್ಜಾಲ ತಾಕಿಸಿದಾಗ ಸಿಕ್ಕಿದ್ದು ಇಷ್ಟು.
ಕೆಲವು ಬಗೆಯ "granite" ಗಳಿಗೆ ಈ ಗುಣ ಇರುತ್ತದೆಂದು ,
ಈ ಕಲ್ಲನ್ನು ಒಂದು ನಿರ್ದಿಷ್ಟ ಬಗೆಯಲ್ಲಿ ತಾಕಿಸಿದಾಗ , ತರಂಗಗಳು ಹೊರಹೊಮ್ಮುತ್ತದೆಂದು ತಿಳಿಯಿತು.
ಹೊನ್ನಮೇಟಿ ಎಸ್ಟೇಟ್ ತನಕ ದಿನವು ಒಂದು ಬಸ್ಸು ಬಂದು ಹೋಗುತ್ತದೆ,
ಬಾಕಿ ಕಲ್ಲಿನ ತನಕ ಚಾರಣ ಮಾಡಬೇಕು,
ಸ್ವಂತ ಗಾಡಿ ಇದ್ರೆ ಒಳ್ಳೇದು ,
ಸಾಧ್ಯವಾದರೆ ಬಿಳಿಗಿರಿ ರಂಗನ ಬೆಟ್ಟಕ್ಕೆ ಹೋದಾಗ ಇಲ್ಲಿಯೂ ಒಮ್ಮೆ ಭೇಟಿ ಕೊಡಿ.

Monday, February 28, 2011

ಆಗುಂಬೆಯ ಅನ್ನಪೂರ್ಣೆ

ಚಂದು ತುಂಬಾ ದಿನಗಳಿಂದ ಹೇಳುತ್ತಿದ್ದ! ನೀವಿಬ್ಬರು ಅಲ್ಲಿಗೆ ಒಮ್ಮೆ ಹೋಗಿ ಬನ್ನಿ ಎಂದು !! ಚಂದು ಬಳಿ ಯಾವಾಗಲೋ ತೆಗೆದುಕೊಂಡ ಫೋನ್ ನಂಬರ್ ಕೂಡ ಇತ್ತು .. ಫೋನಾಯಿಸಿದಾಗ ಮಾತನಾಡಲು ಸಿಕ್ಕಿದ್ದು ಒಬ್ಬ ಪೋರಿ ! ನನ್ನ ಪರಿಚಯ ಮಾಡಿಕೊಂಡು ಅಜ್ಜಿ ಬ್ಯುಸಿಯಾಗಿದ್ದಾರೆ ಇನ್ನೊಮ್ಮೆ ಮಾಡಿ ಎಂದು ಉಲಿದಳು. ಮತ್ತೆ ಮಾಡಿದಾಗ ಸಿಕ್ಕವರೇ ಆಗುಂಬೆ ದೊಡ್ದಮನೆಯ ಕಸ್ತೂರಕ್ಕ. ತುಂಬಾ ಆತ್ಮೀಯವಾಗಿ ಮಾತನಾಡಿ, ನಾವುಗಳು ಯಾವತ್ತು ಬರುತ್ತೇವೆಂದು ತಿಳಿದುಕೊಂಡು, ಬರುವುದಕ್ಕೆ ಮುನ್ನ ಫೋನಾಯಿಸಿ ಎಂದು ಹೇಳಿ ಫೋನ್ ಇಟ್ಟರು.

ಆಗುಂಬೆಯ ದೊಡ್ಡಮನೆ

ಬೆಂಗಳೂರಿನಿಂದ ಡ್ರೈವ್ ಮಾಡಿಕೊಂಡು ಸುಸ್ತಾಗಿ ಆಗುಂಬೆ ತಲುಪಿದಾಗ ಮಧ್ಯಾನ್ಹವಾಗಿತ್ತು. ಹೋದ ಕೂಡಲೇ ಒಂದು ಆತ್ಮೀಯ ನಗೆ, ಕಷಾಯದ ಸ್ವಾಗತ, ಒಂದಷ್ಟು ಪರಿಚಯದ ಮಾತು. ಕಷಾಯವಂತು ತುಂಬಾ ಸೊಗಸಾಗಿತ್ತು. ನಾವಿಬ್ಬರು ಇನ್ನು ದಿನವೂ ಕಾಫಿ , ಟೀ ಬದಲಿಗೆ ಕಷಾಯವನ್ನೇ ಕುಡಿಯುವುದೆಂದು ತೀರ್ಮಾನಿಸಿದೆವು. ನಂತರ ಮನೆಯಲ್ಲಿ ಕಳೆದ ಮೂರು ದಿನಗಳೂ ಅವಿಸ್ಮರಣೀಯ!!! ಬೆಳಗ್ಗೆ ಏಳುವುದೇ ತಡ , ಕಷಾಯ ರೆಡಿ, ನಂತರ ತಿಂಡಿಯ ಸಮಯ, ಮಧ್ಯ ಒಂದು ಕಷಾಯ ಬ್ರೇಕ್ , ನಂತರ ಸವಿ ಸವಿಯ ಊಟ , ಹಾಗೆಯೆ ಅಡ್ಡಾಡಿಕೊಂಡು ಬಂದರೆ ಸಂಜೆಗೆ ಒಂದಷ್ಟು ತಿಂಡಿ, ಮತ್ತೆ ರಾತ್ರಿಯ ಭೋಜನ. ನೀರು ದೋಸೆ, ಪತ್ರೊಡೆ, ಮಜ್ಜಿಗೆ ಹುಳಿ, ಥರವಾರಿಯ ಚಟ್ನಿಗಳು, ಪಲ್ಯಗಳು ವಾಹ್!!! ದಿನವೂ ಕಸ್ತೂರಕ್ಕ ಬಗೆ ಬಗೆಯ ಭಕ್ಷ ಭೋಜ್ಯಗಳನ್ನು ಮಾಡಿ ತಿನ್ನಿಸುತ್ತಿದ್ದರು. ನನಗಂತೂ ದಿನವೂ ರಸಗವಳ.

ನಿಜ ಹೇಳಬೇಕೆಂದರೆ , ಈ ತರಹದ treatment ಒಂದು Homestayನಲ್ಲಿ ನಾನಂತು ನಿರೀಕ್ಷಿಸಿಯೇ ಇರಲಿಲ್ಲ, ನಾವಿಬ್ಬರು ಅಲ್ಲಿ ಮನೆಯವರೇ ಆಗಿಬಿಟ್ಟಿದ್ದೆವು. ದೊಡ್ಡಮನೆಯ ಕಸ್ತೂರಕ್ಕ ಹಲವಾರು ವರುಷಗಳಿಂದ ಪ್ರವಾಸಿಗರಿಗೆ / ಬಂದವರಿಗೆ ಪ್ರತಿಫಲದ ಅಪೇಕ್ಷೆಯೇ ಇಲ್ಲದೆ ಊಟ ಉಪಚಾರ ಮಾಡುತ್ತಾರೆ, ಕೆಲವೊಂದು ಸಂಧರ್ಭಗಳಲ್ಲಿ ಮಧ್ಯರಾತ್ರಿಯಲ್ಲೂ ಮಾಡಿದ್ದೂ ಉಂಟು. ಇದರ ಬೇರು ಹುಡುಕಿಕೊಂಡು ಹೊರಟಾಗ, ಕಸ್ತೂರಕ್ಕ ಹೇಳಿದ್ದು, ಒಮ್ಮೆ ಅವರು ಸಂಸಾರದೊಂದಿಗೆ ಪ್ರವಾಸ ಹೊರಟಾಗ, ಅನುಭವಿಸಿದ ತಾಪತ್ರಯಗಳು , ಕಷ್ಟಗಳನ್ನು ಕಂಡು, ಇವೆಲ್ಲ ಬೇರೆಯವರಿಗೂ ಬರದಿರಲಿ ಎಂದು ಆಗುಂಬೆಯಂತ ಗ್ರಾಮದಲ್ಲಿ (once ) ಈ ಕಾಯಕವನ್ನು ಮುಂದುವರೆಸಿದ್ದಾರೆ. ದೊಡ್ದಮನೆಯಲ್ಲಿ ಯಾವುದೇ ಹೊತ್ತಿನಲ್ಲಿ ಯಾರೇ ಹೋದರೂ, ಹಾಗೆಯೆ ಯಾರನ್ನು ಕಳುಹಿಸಿರದ ಹಲವಾರು ನಿದರ್ಶನಗಳಿವೆ, ಆಗುಂಬೆಯ ಕಗ್ಗಾಡಿನಲ್ಲಿ ಇದರ ಅವಶ್ಯಕತೆಯೂ ಕೂಡ ಇದೆ ಅನ್ನಿ!


ಕಸ್ತೂರಕ್ಕ

ಕಸ್ತೂರಕ್ಕನ ಮನೆಯಲ್ಲಿ ನಿತ್ಯ ದಾಸೋಹ. ಹಲವಾರು ಬಡ ಮಕ್ಕಳು ಮನೆಯಲ್ಲಿಯೇ ವಾರಾನ್ನ ಮಾಡಿಕೊಂಡು ಓದುತ್ತಿದ್ದಾರೆ. ಇನ್ನು ಹಲವಾರು ಮಕ್ಕಳು ಅಲ್ಲೇ ಹತ್ತಿರದ ಹಾಸ್ಟೆಲ್ ನಲ್ಲಿ ಇದ್ದುಕೊಂಡು ತಿಂಡಿ ಊಟಗಳಿಗೆ ಮನೆಗೆ ಬಂದು ಹೋಗುತ್ತಾರೆ. ಉದ್ದೇಶ ಇಷ್ಟೇ! ವಿಧ್ಯಾಭ್ಯಾಸ ಮಾಡಲು ಅನುಕೂಲ ಇರದಿರುವ ಸುತ್ತ ಮುತ್ತಲಿನ ಅನೇಕರಿಗೆ ಅನುಕೂಲ ಕಲ್ಪಿಸಬೇಕು, ಮಕ್ಕಳು ಓದಲು, ಬೆಳೆಯಲು ಅವಕಾಶ ಮಾಡಿ ಕೊಡಬೇಕು ಎನ್ನುವುದು. ಇಷ್ಟನ್ನು ಕೂಡ ಕಸ್ತೂರಕ್ಕ ಎಲೆ ಮರೆಯ ಕಾಯಿಯ ಹಾಗೆ ಕಾಯಕ ಮಾಡಿಕೊಂಡು ಹೋಗುತ್ತಿದ್ದಾರೆ. ಇದು ಅವರ ಮಾನವೀಯತೆಯ ಇನ್ನೊಂದು ಮುಖ.


ಕಸ್ತೂರಕ್ಕ ಮತ್ತು ಅಜ್ಜಿ

ಕಸ್ತೂರಕ್ಕನ ಈ ಕೆಲಸಕ್ಕೆ ಮನೆಯವರೆಲ್ಲರ ಸಹಕಾರವಿದೆ. ಕಸ್ತೂರಕ್ಕನ ತಾಯಿಯಿಂದ, ಮಗಳು, ಅಳಿಯ ಮತ್ತು ಮೊಮ್ಮಕ್ಕಳ ವರೆಗೂ ಎಲ್ಲರೂ ಕೆಲಸದಲ್ಲಿ ಕೈಜೋಡಿಸುತ್ತಾರೆ ಮತ್ತೆ ತುಂಬಾ ಶ್ರದ್ದೆಯಿಂದ ಮತ್ತು ಅತೀವ ಆಸಕ್ತಿಯಿಂದ ಮಾಡುತ್ತಾರೆ. ಕಸ್ತೂರಕ್ಕ ಮತ್ತು ಕುಟುಂಬಕ್ಕೆ ಭಗವಂತ ಇನ್ನು ಹೆಚ್ಚಿನ ಆಯುರಾರೋಗ್ಯಗಳನ್ನು ಕೊಟ್ಟು, ಈ ಕಾಯಕ ಮುಂದುವರೆಯಲಿ ಎಂದು ಹಾರೈಸುತ್ತೇನೆ.

Wednesday, January 26, 2011

ಬಾರಾ ಸಾಧನಕೇರೆಗೆ

ಹೀಗೆಯೇ ಕಾರ್ಯ ನಿಮಿತ್ತ ಹುಬ್ಬಳ್ಳಿಗೆ ಹೋಗುವ ಕಾರ್ಯಕ್ರಮ ಹಾಕಿದ್ದೆ, ಅಂದಹಾಗೆ ಅಷ್ಟು ದೂರ ಹೋಗಿರ್ತೆವಲ್ಲ! ಹಾಗೆಯೇ ವರಕವಿ ಸಾಧನೆ ಮಾಡಿದ ಜಾಗವನ್ನು ಒಮ್ಮೆ ನೋಡೋಣವೆಂದು ಮನಸ್ಸಾಗಿತ್ತು. ಸ್ವಾಮಿಕಾರ್ಯ ಹಾಗು ಸ್ವಕಾರ್ಯವೆಂಬಂತೆ ಸಾಧನಕೇರೆಯನ್ನು ನೋಡಿಕೊಂಡು ಬರೋಣವೆಂದು ಗೆಳೆಯರೆಲ್ಲ ತೀರ್ಮಾನಿಸಿದೆವು. ಹೊರಡುವ ತಯಾರಿಗಳೆಲ್ಲ ಭರದಿಂದ ಸಾಗಿದ್ದಾಗ, ಕಾರಣಾಂತರಗಳಿಂದ "ಸ್ವಾಮಿ ಕಾರ್ಯ " ರದ್ದದಾರೂ "ಸ್ವಕಾರ್ಯ" ಮುಂದುವರೆದಿತ್ತು
ಸಾಧನಕೆರೆಯ ಮುಂಭಾಗ

ವರಕವಿಯು ಓಡಾಡುತ್ತ ಇದ್ದಂತ ಕೆರೆ , ಈಗ ಸ್ವಲ್ಪ ಕಾಯಕಲ್ಪ ಕಾಣುತ್ತಿದೆ. ನಾವುಗಳು ಹೋದಾಗ ಇನ್ನೂ ಕೆಲಸ ಕಾಮಗಾರಿಗಳು ಭರದಿಂದ ಸಾಗುತ್ತಿದ್ದವು. ಸಾಧನ ಕೆರೆಯು ಆ ಹಳೆಯ ಸೊಗಡನ್ನು ಕಳೆದುಕೊಂಡಂತೆ ಇದ್ದರೂ, ಬದಲಾವಣೆ ಅನಿವಾರ್ಯ, ಈ ಕಾಲಕ್ಕೆ ತಕ್ಕಂತೆ ಬದಲಾವಣೆ ಆಗುತ್ತಿದೆ, ಕೆರೆಯ ಸುತ್ತ ನಡೆಯಲಿಕ್ಕೆ ದಾರಿ, ಪಕ್ಕದಲ್ಲೇ ಪಾರ್ಕ್ , ಹಾಗು ಕಾಷ್ಠಶಿಲ್ಪಿದ ಕಲಾಕೃತಿಗಳು ಕಣ್ ಮನ ಸೆಳೆಯುತ್ತವೆ. ನನಗೆ ಫೋಟೋ ತೆಗೆಯಲು ಕೆಲವೊಂದು ಸುಂದರ ಪಕ್ಷಿಗಳು ಸಿಕ್ಕಿದವು. ಕೆರೆಯ ದಡದಲ್ಲಿ ಓಡಾಡಿ ಹಾಗೆಯೆ ಪಕ್ಕಕ್ಕೆ ಬಂದರೆ ಅಲ್ಲಿ ಕಾಣುವುದೇ ಬೇಂದ್ರೆ ಭವನ.



ಬೇಂದ್ರೆ ಟ್ರಸ್ಟ್

ಬೇಂದ್ರೆ ಟ್ರಸ್ಟ್ ನಡೆಸುತ್ತಿರುವ ಭವನದಲ್ಲಿ ವರಕವಿಯವರ ಕೆಲವೊಂದು ಅಪೂರ್ವ ಛಾಯಾಚಿತ್ರಗಳು ಕಾಣಸಿಗುತ್ತವೆ. ಬೇಂದ್ರೆ ಅಜ್ಜನ ಕೆಲ ಛಾಯಾಚಿತ್ರಗಳು ಅವಿಸ್ಮರಣೀಯ!!! ವರಕವಿಯ ಆಯ್ದ ಕೆಲವು ಕವನಗಳ ಭಾವ ಬಿಂಬಿಸುವಂತೆ ತೆಗೆದ ಛಾಯಾಚಿತ್ರಗಳು ತುಂಬಾ ಚನ್ನಾಗಿವೆ. ಇಲ್ಲಿ ವರಕವಿಯು ಪಡೆದ ಪದವಿಗಳನ್ನು ಕೂಡ ಪ್ರದರ್ಶನಕ್ಕೆ ಇಟ್ಟಿದ್ದಾರೆ. ಕನ್ನಡ ಸಾರಸ್ವತ ಲೋಕದ ಹಾಗು ಕರ್ನಾಟಕ ಏಕೀಕರಣದ ರೂವಾರಿಗಳೊಂದಿಗೆ ಬೇಂದ್ರೆ ಅಜ್ಜನ ಫೋಟೋ ನೋಡಿದ ಮೇಲೆ ಅಲ್ಲಿಗೆ ಹೋಗಿದ್ದು ಸಾರ್ಥಕ ಅನಿಸಿತು. ಮೇಲೆ ಇರುವ ಗ್ರಂಥಾಲಯದಲ್ಲಿ ಟ್ರಸ್ಟ್ ನಿಂದ ಪ್ರಕಟಣೆಗೊಂಡ ಕೆಲವು ಪುಸ್ತಕಗಳನ್ನು ಕೊಳ್ಳಬಹುದು. ನಾವುಗಳು ಬೇಂದ್ರೆಯವರ ಸಾಹಿತ್ಯವನ್ನು ಕೇಳಿದಾಗ, ಅಲ್ಲಿಯ ಹಸನ್ಮುಖ ಸಿಬ್ಬಂದಿ ನಮ್ಮನ್ನು ಪಕ್ಕದಲ್ಲೇ ಇರುವ ಬೇಂದ್ರೆ ಯವರ ಮನೆಗೆ ಕರೆದೊಯ್ದರು.

ವರಕವಿಯ ಮನೆ ಹಾಗು ವಾಮನ ಬೇಂದ್ರೆ ( ಚಿತ್ರಕೃಪೆ : ನರಸಿಂಹ)

ವರಕವಿಯು ವಾಸಿಸುತ್ತಿದ್ದ ಮನೆ ಈಗಲೂ ಹಾಗೆಯೆ ಇದೆ. ನಮ್ಮ ಭಾಗ್ಯವೇನೂ ಎಂಬಂತೆ ಡಾ. ವಾಮನ ಬೇಂದ್ರೆಯವರು ಆ ದಿನ ಮನೆಯಲ್ಲಿಯೇ ಇದ್ದರು. ಈ ಇಳಿ ವಯಸ್ಸಿನಲ್ಲಿ ನಮ್ಮನ್ನು ತುಂಬಾ ಆತ್ಮೀಯವಾಗಿ ಸ್ವಾಗತಿಸಿ, ಚೂರು ಸಕ್ಕರೆಯನ್ನು ಬಾಯಿಗೆ ಇಟ್ಟು, ವರಾಂಡದ ಅಲಮೇರಗಳಲ್ಲಿ ಜೋಡಿಸಿಟ್ಟಿರುವ ಹಲವು ಪುರಸ್ಕಾರಗಳು, ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಜ್ಞಾನಪೀಠ ಪ್ರಶಸ್ತಿಗಳನ್ನ ಪರಿಚಯಿಸಿದರು. ಬೇಂದ್ರೆಯವರ ಸಾಹಿತ್ಯ ಇಲ್ಲಿ ಕೊಂಡು ಕೊಳ್ಳಲು ಲಭ್ಯ, ತುಂಬಾ ಆತ್ಮೀಯತೆಯಿಂದ ಮಾತನಾಡಿಸಿದ ವಾಮನ ಬೇಂದ್ರೆ ಯವರು ನಮ್ಮ ಕುಶಲೋಪರಿಗಳನ್ನು ವಿಚಾರಿಸಿಕೊಂಡರು. ಸುಮಾರು ಪುಸ್ತಕಗಳನ್ನು ಕೊಂಡುಕೊಂಡು ವಾಪಸ್ ಹೊರಟ ನಮಗೆ ವಾಮನ ಬೇಂದ್ರೆಯವರು ವರಕವಿಯವರ ಒಂದೊಂದು ಛಾಯಾಚಿತ್ರವನ್ನು ಉಡುಗೊರೆಯಾಗಿ ಕೊಟ್ಟರು. ಆ ಹಿರಿಯ ಚೇತನಕ್ಕೊಮ್ಮೆ ನಮಸ್ಕರಿಸಿ ಹೊರಟ ನಮಗೆ ಮನಸ್ಸಿನ ತುಂಬಾ ಬೇಂದ್ರೆಯವರೇ ತುಂಬಿಕೊಂಡಿದ್ದರು.

Saturday, January 01, 2011

ಕನ್ನಡ ರಾಜ್ಯೋತ್ಸವದ ಟಿ-ಶರ್ಟ ನ ಕಥೆ

ಬ್ಲಾಗಿನ ಪ್ರಪಂಚಕ್ಕೆ ಬಂದು ತುಂಬಾ ದಿನವಾಯಿತು! ಕನ್ನಡದ ಬ್ಲಾಗು ಕೂಡ ಶುರು ಮಾಡಿ ಹಲವಾರು ದಿವಸಗಳೇ ಕಳೆದವು, ಹುಟ್ಟಿದ್ದು ಬೆಳೆದಿದ್ದು ಎಲ್ಲಾ ಕನ್ನಡ ಮೀಡಿಯಂನಲ್ಲೆ ಅದರೂ ಬರೆಯಲು ಕುಳಿತರೆ ಲಹರಿ ಬರುತ್ತಿರಲಿಲ್ಲ, ಯೋಚನೆ ಮುಂದೆ ಓದುತ್ತಿರಲಿಲ್ಲ. ಸ್ನೇಹಿತ, ಅಲ್ಲ ಅಣ್ಣ! ಬಾಲುವಿನ ಒತ್ತಾಸೆ ತುಂಬಾ ದಿನದಿಂದಲೂ ಇತ್ತು. ಹೀಗೆಯೇ ಒಂದು ದಿನ ಬರೆಯೋಣ ಎಂದು ಕುಳಿತೆ, ವಿಷಯವೂ ಸಿಕ್ಕಿತು. ನಾವು ನಾಲ್ಕು ಜನ ಸ್ನೇಹಿತರು ಈ ಬಾರಿ ಮಾಡಿಸಿದ ಕನ್ನಡ ರಾಜ್ಯೋತ್ಸವದ ಟಿ-ಶರ್ಟನ ಕಥೆ.

ನಾವು ಸ್ನೇಹಿತರು ಈಗ ಕೆಲವು ವರ್ಷಗಳಿಂದ ಮಾಡಿಕೊಂಡು ಬಂದಿರುವ ವಾಡಿಕೆಯಂತೆ ಈ ಬಾರಿಯೂ ಕನ್ನಡ ರಾಜ್ಯೋತ್ಸವಕ್ಕೆಂದು ಟಿ-ಶರ್ಟ ಮಾಡಿಸಲು ಹೊರಟೆವು. ನನ್ನ ಹಾಗು ನರಸಿಂಹನ ಮಧ್ಯೆ ಈ ಬಾರಿಯ ವಿನ್ಯಾಸ ಹೇಗಿರಬೇಕೆಂದು ಭಾರಿ ಜಿಜ್ಞಾಸೆಯೂ ಆಯಿತು. ಕೊನೆಗೆ ಮುಂಭಾಗದಲ್ಲಿ ಹೊಯ್ಸಳ ರಾಜ್ಯವಂಶದ ಕುರುಹಾದ ಸಳ ಮತ್ತು ಹುಲಿಯನ್ನೂ ಹಾಗು ಹಿಂಭಾಗದಲ್ಲಿ ಸರ್ವಜ್ಞನ ವಚನಗಳನ್ನು ಮಾಡಿಸುವುದೆಂದು ಆಯಿತು ತೀರ್ಮಾನ! ನಂತರ ಶುರುವಾಯಿತು ಕಷ್ಟದ ಕೆಲಸ , ವಚನಗಳನ್ನು ಆಯ್ಕೆ ಮಾಡುವುದು! ಹೇಳಿ ಕೇಳಿ ಸರ್ವಜ್ಞನ ವಚನಗಳು, ಆಡು ಮಾತಿನಿಂದ ಪ್ರಚಲಿತಗೊಂಡಿವೆ, ಹಲವಾರು ಸಂಶೋಧಕರು ಬರೆದಿದ್ದಾರೇನೋ ಸರಿ , ಆದರೆ ಮೂಲ ಯಾವುದು? ಯಾವುದು ಸರಿ ? ಎಂಬ ಪ್ರಶ್ನೆಗಳು. ಗೆಳೆಯ ನರಸಿಂಹನ ಬಳಿ ಇರುವ ಪುಸ್ತಕಗಳು , ಹಾಗು ಇಂಟರ್ನೆಟ್ ನಲ್ಲಿ ಕೆಲವು ವಚನಗಳನ್ನು ಇಬ್ಬರೂ ಸೇರಿ ಹುದುಕಿದ್ದಾಯಿತು. ಹುಡುಕಿ ಆಯ್ಕೆ ಮಾಡಿದ್ದೂ ೧೫ , ಅದರಲ್ಲಿ ಕೊನೆ ಘಟ್ಟಕ್ಕೆ ಬಂದಿದ್ದು ೮ ಮಾತ್ರ.

ಅಂತೂ ಇಂತೂ ಟಿ-ಶರ್ಟ್ ಮಾಡುವವನ ಬಳಿ ವಚನಗಳನ್ನು ಕೊಟ್ಟರೆ, ಮೊದಲು ಮಾಡಿದ Sample T-shirt ಗಳಲ್ಲಿ ಕನ್ನಡದ ಕಗ್ಗೊಲೆಯೇ ಆಗಿತ್ತು! ಹೇಳಿ ಕೇಳಿ ಅವನೊಬ್ಬ ತಮಿಳು ತಲೆ! ಇನ್ನೇನಾಗುತ್ತೆ ಹೇಳಿ! ಹಲವಾರು ತಿದ್ದುಪಡಿಗಳ ನಂತರ ವಚನಗಳು ಚನ್ನಾಗಿ ಮೂಡಿ ಬಂದವು. ಇಷ್ಟರ ಮಧ್ಯೆ ಹೊಯ್ಸಳ Logo ಕೂಡ ಚನ್ನಾಗಿ ಮೂಡಿ ಬಂದಿತು. ಕೆಲವು ವಾರಗಳನಂತರ T-shirt ಗಳು ಕೂಡ ಚನ್ನಾಗಿ ಮೂಡಿ ಬಂದವು. ಏನೋ ಒಂದು ಸಣ್ಣ ಸೇವೆ. ಏನಿಲ್ಲ ಅಂದರೂ ೪೫೦ ಜನ ಅದನ್ನು ಧರಿಸುತ್ತಾರೆ, ಒಂದಷ್ಟು ಜನ ಓದುತ್ತಾರಲ್ಲ ಅನ್ನೋ ಭಾವನೆ. ಒಂದು ಸಾರ್ಥಕತೆಭಾವ ! ಅಷ್ಟೇ ಸಾಕು!

ಆಯ್ದ ೮ ವಚನಗಳು ಇಲ್ಲಿವೆ



ಕೊಟ್ಟಿದ್ದು ತನಗೆ ಬಚ್ಚಿಟ್ಟದ್ದು ಪರರಿಗೆ
ಕೊಟ್ಟಿದ್ದು ಕೆಟ್ಟಿತೆನಬೇಡ ಮುಂದಕ್ಕೆ
ಕಟ್ಟಿಹುದು ಬುತ್ತಿ ಸರ್ವಜ್ಞ


ಹಿರಿಯ ನಾನೆನಬೇಡ ಗುರುವ ನಿಂದಿಸಬೇಡ
ಜರೆವವರ ಕೂಡ ಹಗೆಬೇಡ ಬಂಗಾರ
ದೆರವು ಬೇಡೆಂದ ಸರ್ವಜ್ಞ


ಆಡದಲೆ ಕೊಡುವವನು ರೂಢಿಯೊಳಗುತ್ತಮನು
ಆಡಿ ಕೊಡುವವನು ಮಧ್ಯಮನು ಅಧಮ ತಾ
ನಾಡಿ ಕೊಡದವನು ಸರ್ವಜ್ಞ

ಅನ್ನವನು ಇಕ್ಕುವುದು ನನ್ನಿಯನು ನುಡಿಯುವುದು
ತನ್ನಂತೆ ಪರರ ಬಗೆದೊಡೆ ಕೈಲಾಸ
ಬಿನ್ನಾಣವಕ್ಕು ಸರ್ವಜ್ಞ

ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ
ದುರ್ಜನರ ಸಂಗದೊಡನಾಟ ಬಚ್ಚಲಿನ
ರೊಜ್ಜಿನಂತಿಹುದು ಸರ್ವಜ್ಞ

ಚಿತ್ತವಿಲ್ಲದೆ ಗುಡಿಯ ಸುತ್ತಿದೊಡೆ ಫಲವೇನು ?
ಎತ್ತು ಗಾಣವನು ಹೊತ್ತು ತಾ ನಿತ್ಯದಲಿ
ಸುತ್ತಿಬಂದಂತೆ ಸರ್ವಜ್ಞ

ವೇಷಗಳ ಧರಿಸೇನು ? ದೇಶಗಳ ತಿರುಗೇನು ?
ದೋಷಗಳ ಹೇಳಿ ಫಲವೇನು ? ಮನಸಿನಾ
ಆಶೆ ಬಿಡದನಕ ಸರ್ವಜ್ಞ

ಜ್ಞಾನದಿಂದಲಿ ಇಹವು ಜ್ಞಾನದಿಂದಲಿ ಪರವು
ಜ್ಞಾನವಿಲ್ಲದಲೆ ಸಕಲವೂ ತನಗಿದ್ದು
ಹಾನಿ ಕಾಣಯ್ಯ ಸರ್ವಜ್ಞ