Saturday, December 01, 2012

......ಧರಿತ್ರಿ.....

ಉದ್ಭವಿಸಿದೆ ಮಹಾ ಸ್ಫೋಟದಲ್ಲಿ
ಸ್ಫೋಟಿಸಿತು ಜೀವ ಸಂಕುಲವು ನನ್ನ ಗರ್ಭದಿಂದ
ಹೊತ್ತೆ, ಹೆತ್ತೆ, ಹಲವಾರು ಮಕ್ಕಳನ್ನು 
ಬಲಶಾಲಿಗಳನ್ನ... ಒಂದೊಂದೂ... ಮುತ್ತು
ದಾರಿಯನ್ನು ಸವೆಸದೆ, ಹೋದವು ಹತ್ತು ಹಲವು ಸತ್ತು....
 
ಇತ್ತೊಂದು ನನ್ನಲ್ಲಿ ಅದಮ್ಯ ಆಸೆ
ಒಂದು ಚೇತನಕ್ಕೆ
ಎರೆದೆ ನನ್ನದೆಲ್ಲವನ್ನು ಧಾರೆ
ಒಂದು ಬೀಜಕ್ಕೆ
ಇಟ್ಟೆ ಅದನ್ನು ಜೀವಸಂಕುಲದ ತುತ್ತ ತುದಿಯಲ್ಲಿ
ಎಲ್ಲರನು ಪೊರೆಯಲಿ ಎಂದು ...

 
ಆಯಿತು ನಾ ಕಂಡ ಭರವಸೆ ಹುಸಿ
ಹೊರಟಿದ್ದಾನೆ ಸಂಕುಲದ ನಿರ್ನಾಮಕ್ಕೆಂದು
ಹಾಕುತ್ತಿರುವನು ನನ್ನ ಗರ್ಭಕ್ಕೆ ಕೈಯನ್ನು 
ಸಾಕಾಗಿದೆ ನನಗಿನ್ನು;
ಇಲ್ಲ ತಾಳ್ಮೆ
ಕಾಯುತಿರುವೆನು ದಾರಿ
ಮತ್ತೊಂದು ಮಹಾಸ್ಫೋಟ ಎಂದು?

Monday, November 05, 2012

ಮಂಥನ!

ಮಥಿಸಬೇಕು ಅಂತರಂಗ 
ಕಟ್ಟುವುದು ಆಗಲೇ ಅಲ್ಲವೇ ಕೆನೆ 
ನಂತರ ಮಾತ್ರವೇ ಮೊಸರು -ಬೆಣ್ಣೆ 
ಮಥಿಸಿದಾಗಲೇ ಕ್ಷೀರ ಸಾಗರ
ಉಗಮಿಸಿಹುದು ಹಾಲು - ಹಾಲಾಹಲ
ಉಳಿಯೇಟಿನಿಂದಲೇ ಮೂರುತಿ
ಆಗುವುದು ಸುಂದರ, ಪಡೆವುದು ಕೀರುತಿ
ನಿರಂತರ ಮಂಥನವೀ  ಜೀವನ
ಸಿಗುವುದಿಲ್ಲಿ ದಿನವೂ ಹಾಲು - ಹಾಲಾಹಲ!