Wednesday, January 26, 2011

ಬಾರಾ ಸಾಧನಕೇರೆಗೆ

ಹೀಗೆಯೇ ಕಾರ್ಯ ನಿಮಿತ್ತ ಹುಬ್ಬಳ್ಳಿಗೆ ಹೋಗುವ ಕಾರ್ಯಕ್ರಮ ಹಾಕಿದ್ದೆ, ಅಂದಹಾಗೆ ಅಷ್ಟು ದೂರ ಹೋಗಿರ್ತೆವಲ್ಲ! ಹಾಗೆಯೇ ವರಕವಿ ಸಾಧನೆ ಮಾಡಿದ ಜಾಗವನ್ನು ಒಮ್ಮೆ ನೋಡೋಣವೆಂದು ಮನಸ್ಸಾಗಿತ್ತು. ಸ್ವಾಮಿಕಾರ್ಯ ಹಾಗು ಸ್ವಕಾರ್ಯವೆಂಬಂತೆ ಸಾಧನಕೇರೆಯನ್ನು ನೋಡಿಕೊಂಡು ಬರೋಣವೆಂದು ಗೆಳೆಯರೆಲ್ಲ ತೀರ್ಮಾನಿಸಿದೆವು. ಹೊರಡುವ ತಯಾರಿಗಳೆಲ್ಲ ಭರದಿಂದ ಸಾಗಿದ್ದಾಗ, ಕಾರಣಾಂತರಗಳಿಂದ "ಸ್ವಾಮಿ ಕಾರ್ಯ " ರದ್ದದಾರೂ "ಸ್ವಕಾರ್ಯ" ಮುಂದುವರೆದಿತ್ತು
ಸಾಧನಕೆರೆಯ ಮುಂಭಾಗ

ವರಕವಿಯು ಓಡಾಡುತ್ತ ಇದ್ದಂತ ಕೆರೆ , ಈಗ ಸ್ವಲ್ಪ ಕಾಯಕಲ್ಪ ಕಾಣುತ್ತಿದೆ. ನಾವುಗಳು ಹೋದಾಗ ಇನ್ನೂ ಕೆಲಸ ಕಾಮಗಾರಿಗಳು ಭರದಿಂದ ಸಾಗುತ್ತಿದ್ದವು. ಸಾಧನ ಕೆರೆಯು ಆ ಹಳೆಯ ಸೊಗಡನ್ನು ಕಳೆದುಕೊಂಡಂತೆ ಇದ್ದರೂ, ಬದಲಾವಣೆ ಅನಿವಾರ್ಯ, ಈ ಕಾಲಕ್ಕೆ ತಕ್ಕಂತೆ ಬದಲಾವಣೆ ಆಗುತ್ತಿದೆ, ಕೆರೆಯ ಸುತ್ತ ನಡೆಯಲಿಕ್ಕೆ ದಾರಿ, ಪಕ್ಕದಲ್ಲೇ ಪಾರ್ಕ್ , ಹಾಗು ಕಾಷ್ಠಶಿಲ್ಪಿದ ಕಲಾಕೃತಿಗಳು ಕಣ್ ಮನ ಸೆಳೆಯುತ್ತವೆ. ನನಗೆ ಫೋಟೋ ತೆಗೆಯಲು ಕೆಲವೊಂದು ಸುಂದರ ಪಕ್ಷಿಗಳು ಸಿಕ್ಕಿದವು. ಕೆರೆಯ ದಡದಲ್ಲಿ ಓಡಾಡಿ ಹಾಗೆಯೆ ಪಕ್ಕಕ್ಕೆ ಬಂದರೆ ಅಲ್ಲಿ ಕಾಣುವುದೇ ಬೇಂದ್ರೆ ಭವನ.ಬೇಂದ್ರೆ ಟ್ರಸ್ಟ್

ಬೇಂದ್ರೆ ಟ್ರಸ್ಟ್ ನಡೆಸುತ್ತಿರುವ ಭವನದಲ್ಲಿ ವರಕವಿಯವರ ಕೆಲವೊಂದು ಅಪೂರ್ವ ಛಾಯಾಚಿತ್ರಗಳು ಕಾಣಸಿಗುತ್ತವೆ. ಬೇಂದ್ರೆ ಅಜ್ಜನ ಕೆಲ ಛಾಯಾಚಿತ್ರಗಳು ಅವಿಸ್ಮರಣೀಯ!!! ವರಕವಿಯ ಆಯ್ದ ಕೆಲವು ಕವನಗಳ ಭಾವ ಬಿಂಬಿಸುವಂತೆ ತೆಗೆದ ಛಾಯಾಚಿತ್ರಗಳು ತುಂಬಾ ಚನ್ನಾಗಿವೆ. ಇಲ್ಲಿ ವರಕವಿಯು ಪಡೆದ ಪದವಿಗಳನ್ನು ಕೂಡ ಪ್ರದರ್ಶನಕ್ಕೆ ಇಟ್ಟಿದ್ದಾರೆ. ಕನ್ನಡ ಸಾರಸ್ವತ ಲೋಕದ ಹಾಗು ಕರ್ನಾಟಕ ಏಕೀಕರಣದ ರೂವಾರಿಗಳೊಂದಿಗೆ ಬೇಂದ್ರೆ ಅಜ್ಜನ ಫೋಟೋ ನೋಡಿದ ಮೇಲೆ ಅಲ್ಲಿಗೆ ಹೋಗಿದ್ದು ಸಾರ್ಥಕ ಅನಿಸಿತು. ಮೇಲೆ ಇರುವ ಗ್ರಂಥಾಲಯದಲ್ಲಿ ಟ್ರಸ್ಟ್ ನಿಂದ ಪ್ರಕಟಣೆಗೊಂಡ ಕೆಲವು ಪುಸ್ತಕಗಳನ್ನು ಕೊಳ್ಳಬಹುದು. ನಾವುಗಳು ಬೇಂದ್ರೆಯವರ ಸಾಹಿತ್ಯವನ್ನು ಕೇಳಿದಾಗ, ಅಲ್ಲಿಯ ಹಸನ್ಮುಖ ಸಿಬ್ಬಂದಿ ನಮ್ಮನ್ನು ಪಕ್ಕದಲ್ಲೇ ಇರುವ ಬೇಂದ್ರೆ ಯವರ ಮನೆಗೆ ಕರೆದೊಯ್ದರು.

ವರಕವಿಯ ಮನೆ ಹಾಗು ವಾಮನ ಬೇಂದ್ರೆ ( ಚಿತ್ರಕೃಪೆ : ನರಸಿಂಹ)

ವರಕವಿಯು ವಾಸಿಸುತ್ತಿದ್ದ ಮನೆ ಈಗಲೂ ಹಾಗೆಯೆ ಇದೆ. ನಮ್ಮ ಭಾಗ್ಯವೇನೂ ಎಂಬಂತೆ ಡಾ. ವಾಮನ ಬೇಂದ್ರೆಯವರು ಆ ದಿನ ಮನೆಯಲ್ಲಿಯೇ ಇದ್ದರು. ಈ ಇಳಿ ವಯಸ್ಸಿನಲ್ಲಿ ನಮ್ಮನ್ನು ತುಂಬಾ ಆತ್ಮೀಯವಾಗಿ ಸ್ವಾಗತಿಸಿ, ಚೂರು ಸಕ್ಕರೆಯನ್ನು ಬಾಯಿಗೆ ಇಟ್ಟು, ವರಾಂಡದ ಅಲಮೇರಗಳಲ್ಲಿ ಜೋಡಿಸಿಟ್ಟಿರುವ ಹಲವು ಪುರಸ್ಕಾರಗಳು, ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಜ್ಞಾನಪೀಠ ಪ್ರಶಸ್ತಿಗಳನ್ನ ಪರಿಚಯಿಸಿದರು. ಬೇಂದ್ರೆಯವರ ಸಾಹಿತ್ಯ ಇಲ್ಲಿ ಕೊಂಡು ಕೊಳ್ಳಲು ಲಭ್ಯ, ತುಂಬಾ ಆತ್ಮೀಯತೆಯಿಂದ ಮಾತನಾಡಿಸಿದ ವಾಮನ ಬೇಂದ್ರೆ ಯವರು ನಮ್ಮ ಕುಶಲೋಪರಿಗಳನ್ನು ವಿಚಾರಿಸಿಕೊಂಡರು. ಸುಮಾರು ಪುಸ್ತಕಗಳನ್ನು ಕೊಂಡುಕೊಂಡು ವಾಪಸ್ ಹೊರಟ ನಮಗೆ ವಾಮನ ಬೇಂದ್ರೆಯವರು ವರಕವಿಯವರ ಒಂದೊಂದು ಛಾಯಾಚಿತ್ರವನ್ನು ಉಡುಗೊರೆಯಾಗಿ ಕೊಟ್ಟರು. ಆ ಹಿರಿಯ ಚೇತನಕ್ಕೊಮ್ಮೆ ನಮಸ್ಕರಿಸಿ ಹೊರಟ ನಮಗೆ ಮನಸ್ಸಿನ ತುಂಬಾ ಬೇಂದ್ರೆಯವರೇ ತುಂಬಿಕೊಂಡಿದ್ದರು.

Saturday, January 01, 2011

ಕನ್ನಡ ರಾಜ್ಯೋತ್ಸವದ ಟಿ-ಶರ್ಟ ನ ಕಥೆ

ಬ್ಲಾಗಿನ ಪ್ರಪಂಚಕ್ಕೆ ಬಂದು ತುಂಬಾ ದಿನವಾಯಿತು! ಕನ್ನಡದ ಬ್ಲಾಗು ಕೂಡ ಶುರು ಮಾಡಿ ಹಲವಾರು ದಿವಸಗಳೇ ಕಳೆದವು, ಹುಟ್ಟಿದ್ದು ಬೆಳೆದಿದ್ದು ಎಲ್ಲಾ ಕನ್ನಡ ಮೀಡಿಯಂನಲ್ಲೆ ಅದರೂ ಬರೆಯಲು ಕುಳಿತರೆ ಲಹರಿ ಬರುತ್ತಿರಲಿಲ್ಲ, ಯೋಚನೆ ಮುಂದೆ ಓದುತ್ತಿರಲಿಲ್ಲ. ಸ್ನೇಹಿತ, ಅಲ್ಲ ಅಣ್ಣ! ಬಾಲುವಿನ ಒತ್ತಾಸೆ ತುಂಬಾ ದಿನದಿಂದಲೂ ಇತ್ತು. ಹೀಗೆಯೇ ಒಂದು ದಿನ ಬರೆಯೋಣ ಎಂದು ಕುಳಿತೆ, ವಿಷಯವೂ ಸಿಕ್ಕಿತು. ನಾವು ನಾಲ್ಕು ಜನ ಸ್ನೇಹಿತರು ಈ ಬಾರಿ ಮಾಡಿಸಿದ ಕನ್ನಡ ರಾಜ್ಯೋತ್ಸವದ ಟಿ-ಶರ್ಟನ ಕಥೆ.

ನಾವು ಸ್ನೇಹಿತರು ಈಗ ಕೆಲವು ವರ್ಷಗಳಿಂದ ಮಾಡಿಕೊಂಡು ಬಂದಿರುವ ವಾಡಿಕೆಯಂತೆ ಈ ಬಾರಿಯೂ ಕನ್ನಡ ರಾಜ್ಯೋತ್ಸವಕ್ಕೆಂದು ಟಿ-ಶರ್ಟ ಮಾಡಿಸಲು ಹೊರಟೆವು. ನನ್ನ ಹಾಗು ನರಸಿಂಹನ ಮಧ್ಯೆ ಈ ಬಾರಿಯ ವಿನ್ಯಾಸ ಹೇಗಿರಬೇಕೆಂದು ಭಾರಿ ಜಿಜ್ಞಾಸೆಯೂ ಆಯಿತು. ಕೊನೆಗೆ ಮುಂಭಾಗದಲ್ಲಿ ಹೊಯ್ಸಳ ರಾಜ್ಯವಂಶದ ಕುರುಹಾದ ಸಳ ಮತ್ತು ಹುಲಿಯನ್ನೂ ಹಾಗು ಹಿಂಭಾಗದಲ್ಲಿ ಸರ್ವಜ್ಞನ ವಚನಗಳನ್ನು ಮಾಡಿಸುವುದೆಂದು ಆಯಿತು ತೀರ್ಮಾನ! ನಂತರ ಶುರುವಾಯಿತು ಕಷ್ಟದ ಕೆಲಸ , ವಚನಗಳನ್ನು ಆಯ್ಕೆ ಮಾಡುವುದು! ಹೇಳಿ ಕೇಳಿ ಸರ್ವಜ್ಞನ ವಚನಗಳು, ಆಡು ಮಾತಿನಿಂದ ಪ್ರಚಲಿತಗೊಂಡಿವೆ, ಹಲವಾರು ಸಂಶೋಧಕರು ಬರೆದಿದ್ದಾರೇನೋ ಸರಿ , ಆದರೆ ಮೂಲ ಯಾವುದು? ಯಾವುದು ಸರಿ ? ಎಂಬ ಪ್ರಶ್ನೆಗಳು. ಗೆಳೆಯ ನರಸಿಂಹನ ಬಳಿ ಇರುವ ಪುಸ್ತಕಗಳು , ಹಾಗು ಇಂಟರ್ನೆಟ್ ನಲ್ಲಿ ಕೆಲವು ವಚನಗಳನ್ನು ಇಬ್ಬರೂ ಸೇರಿ ಹುದುಕಿದ್ದಾಯಿತು. ಹುಡುಕಿ ಆಯ್ಕೆ ಮಾಡಿದ್ದೂ ೧೫ , ಅದರಲ್ಲಿ ಕೊನೆ ಘಟ್ಟಕ್ಕೆ ಬಂದಿದ್ದು ೮ ಮಾತ್ರ.

ಅಂತೂ ಇಂತೂ ಟಿ-ಶರ್ಟ್ ಮಾಡುವವನ ಬಳಿ ವಚನಗಳನ್ನು ಕೊಟ್ಟರೆ, ಮೊದಲು ಮಾಡಿದ Sample T-shirt ಗಳಲ್ಲಿ ಕನ್ನಡದ ಕಗ್ಗೊಲೆಯೇ ಆಗಿತ್ತು! ಹೇಳಿ ಕೇಳಿ ಅವನೊಬ್ಬ ತಮಿಳು ತಲೆ! ಇನ್ನೇನಾಗುತ್ತೆ ಹೇಳಿ! ಹಲವಾರು ತಿದ್ದುಪಡಿಗಳ ನಂತರ ವಚನಗಳು ಚನ್ನಾಗಿ ಮೂಡಿ ಬಂದವು. ಇಷ್ಟರ ಮಧ್ಯೆ ಹೊಯ್ಸಳ Logo ಕೂಡ ಚನ್ನಾಗಿ ಮೂಡಿ ಬಂದಿತು. ಕೆಲವು ವಾರಗಳನಂತರ T-shirt ಗಳು ಕೂಡ ಚನ್ನಾಗಿ ಮೂಡಿ ಬಂದವು. ಏನೋ ಒಂದು ಸಣ್ಣ ಸೇವೆ. ಏನಿಲ್ಲ ಅಂದರೂ ೪೫೦ ಜನ ಅದನ್ನು ಧರಿಸುತ್ತಾರೆ, ಒಂದಷ್ಟು ಜನ ಓದುತ್ತಾರಲ್ಲ ಅನ್ನೋ ಭಾವನೆ. ಒಂದು ಸಾರ್ಥಕತೆಭಾವ ! ಅಷ್ಟೇ ಸಾಕು!

ಆಯ್ದ ೮ ವಚನಗಳು ಇಲ್ಲಿವೆಕೊಟ್ಟಿದ್ದು ತನಗೆ ಬಚ್ಚಿಟ್ಟದ್ದು ಪರರಿಗೆ
ಕೊಟ್ಟಿದ್ದು ಕೆಟ್ಟಿತೆನಬೇಡ ಮುಂದಕ್ಕೆ
ಕಟ್ಟಿಹುದು ಬುತ್ತಿ ಸರ್ವಜ್ಞ


ಹಿರಿಯ ನಾನೆನಬೇಡ ಗುರುವ ನಿಂದಿಸಬೇಡ
ಜರೆವವರ ಕೂಡ ಹಗೆಬೇಡ ಬಂಗಾರ
ದೆರವು ಬೇಡೆಂದ ಸರ್ವಜ್ಞ


ಆಡದಲೆ ಕೊಡುವವನು ರೂಢಿಯೊಳಗುತ್ತಮನು
ಆಡಿ ಕೊಡುವವನು ಮಧ್ಯಮನು ಅಧಮ ತಾ
ನಾಡಿ ಕೊಡದವನು ಸರ್ವಜ್ಞ

ಅನ್ನವನು ಇಕ್ಕುವುದು ನನ್ನಿಯನು ನುಡಿಯುವುದು
ತನ್ನಂತೆ ಪರರ ಬಗೆದೊಡೆ ಕೈಲಾಸ
ಬಿನ್ನಾಣವಕ್ಕು ಸರ್ವಜ್ಞ

ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ
ದುರ್ಜನರ ಸಂಗದೊಡನಾಟ ಬಚ್ಚಲಿನ
ರೊಜ್ಜಿನಂತಿಹುದು ಸರ್ವಜ್ಞ

ಚಿತ್ತವಿಲ್ಲದೆ ಗುಡಿಯ ಸುತ್ತಿದೊಡೆ ಫಲವೇನು ?
ಎತ್ತು ಗಾಣವನು ಹೊತ್ತು ತಾ ನಿತ್ಯದಲಿ
ಸುತ್ತಿಬಂದಂತೆ ಸರ್ವಜ್ಞ

ವೇಷಗಳ ಧರಿಸೇನು ? ದೇಶಗಳ ತಿರುಗೇನು ?
ದೋಷಗಳ ಹೇಳಿ ಫಲವೇನು ? ಮನಸಿನಾ
ಆಶೆ ಬಿಡದನಕ ಸರ್ವಜ್ಞ

ಜ್ಞಾನದಿಂದಲಿ ಇಹವು ಜ್ಞಾನದಿಂದಲಿ ಪರವು
ಜ್ಞಾನವಿಲ್ಲದಲೆ ಸಕಲವೂ ತನಗಿದ್ದು
ಹಾನಿ ಕಾಣಯ್ಯ ಸರ್ವಜ್ಞ