Wednesday, January 26, 2011

ಬಾರಾ ಸಾಧನಕೇರೆಗೆ

ಹೀಗೆಯೇ ಕಾರ್ಯ ನಿಮಿತ್ತ ಹುಬ್ಬಳ್ಳಿಗೆ ಹೋಗುವ ಕಾರ್ಯಕ್ರಮ ಹಾಕಿದ್ದೆ, ಅಂದಹಾಗೆ ಅಷ್ಟು ದೂರ ಹೋಗಿರ್ತೆವಲ್ಲ! ಹಾಗೆಯೇ ವರಕವಿ ಸಾಧನೆ ಮಾಡಿದ ಜಾಗವನ್ನು ಒಮ್ಮೆ ನೋಡೋಣವೆಂದು ಮನಸ್ಸಾಗಿತ್ತು. ಸ್ವಾಮಿಕಾರ್ಯ ಹಾಗು ಸ್ವಕಾರ್ಯವೆಂಬಂತೆ ಸಾಧನಕೇರೆಯನ್ನು ನೋಡಿಕೊಂಡು ಬರೋಣವೆಂದು ಗೆಳೆಯರೆಲ್ಲ ತೀರ್ಮಾನಿಸಿದೆವು. ಹೊರಡುವ ತಯಾರಿಗಳೆಲ್ಲ ಭರದಿಂದ ಸಾಗಿದ್ದಾಗ, ಕಾರಣಾಂತರಗಳಿಂದ "ಸ್ವಾಮಿ ಕಾರ್ಯ " ರದ್ದದಾರೂ "ಸ್ವಕಾರ್ಯ" ಮುಂದುವರೆದಿತ್ತು
ಸಾಧನಕೆರೆಯ ಮುಂಭಾಗ

ವರಕವಿಯು ಓಡಾಡುತ್ತ ಇದ್ದಂತ ಕೆರೆ , ಈಗ ಸ್ವಲ್ಪ ಕಾಯಕಲ್ಪ ಕಾಣುತ್ತಿದೆ. ನಾವುಗಳು ಹೋದಾಗ ಇನ್ನೂ ಕೆಲಸ ಕಾಮಗಾರಿಗಳು ಭರದಿಂದ ಸಾಗುತ್ತಿದ್ದವು. ಸಾಧನ ಕೆರೆಯು ಆ ಹಳೆಯ ಸೊಗಡನ್ನು ಕಳೆದುಕೊಂಡಂತೆ ಇದ್ದರೂ, ಬದಲಾವಣೆ ಅನಿವಾರ್ಯ, ಈ ಕಾಲಕ್ಕೆ ತಕ್ಕಂತೆ ಬದಲಾವಣೆ ಆಗುತ್ತಿದೆ, ಕೆರೆಯ ಸುತ್ತ ನಡೆಯಲಿಕ್ಕೆ ದಾರಿ, ಪಕ್ಕದಲ್ಲೇ ಪಾರ್ಕ್ , ಹಾಗು ಕಾಷ್ಠಶಿಲ್ಪಿದ ಕಲಾಕೃತಿಗಳು ಕಣ್ ಮನ ಸೆಳೆಯುತ್ತವೆ. ನನಗೆ ಫೋಟೋ ತೆಗೆಯಲು ಕೆಲವೊಂದು ಸುಂದರ ಪಕ್ಷಿಗಳು ಸಿಕ್ಕಿದವು. ಕೆರೆಯ ದಡದಲ್ಲಿ ಓಡಾಡಿ ಹಾಗೆಯೆ ಪಕ್ಕಕ್ಕೆ ಬಂದರೆ ಅಲ್ಲಿ ಕಾಣುವುದೇ ಬೇಂದ್ರೆ ಭವನ.



ಬೇಂದ್ರೆ ಟ್ರಸ್ಟ್

ಬೇಂದ್ರೆ ಟ್ರಸ್ಟ್ ನಡೆಸುತ್ತಿರುವ ಭವನದಲ್ಲಿ ವರಕವಿಯವರ ಕೆಲವೊಂದು ಅಪೂರ್ವ ಛಾಯಾಚಿತ್ರಗಳು ಕಾಣಸಿಗುತ್ತವೆ. ಬೇಂದ್ರೆ ಅಜ್ಜನ ಕೆಲ ಛಾಯಾಚಿತ್ರಗಳು ಅವಿಸ್ಮರಣೀಯ!!! ವರಕವಿಯ ಆಯ್ದ ಕೆಲವು ಕವನಗಳ ಭಾವ ಬಿಂಬಿಸುವಂತೆ ತೆಗೆದ ಛಾಯಾಚಿತ್ರಗಳು ತುಂಬಾ ಚನ್ನಾಗಿವೆ. ಇಲ್ಲಿ ವರಕವಿಯು ಪಡೆದ ಪದವಿಗಳನ್ನು ಕೂಡ ಪ್ರದರ್ಶನಕ್ಕೆ ಇಟ್ಟಿದ್ದಾರೆ. ಕನ್ನಡ ಸಾರಸ್ವತ ಲೋಕದ ಹಾಗು ಕರ್ನಾಟಕ ಏಕೀಕರಣದ ರೂವಾರಿಗಳೊಂದಿಗೆ ಬೇಂದ್ರೆ ಅಜ್ಜನ ಫೋಟೋ ನೋಡಿದ ಮೇಲೆ ಅಲ್ಲಿಗೆ ಹೋಗಿದ್ದು ಸಾರ್ಥಕ ಅನಿಸಿತು. ಮೇಲೆ ಇರುವ ಗ್ರಂಥಾಲಯದಲ್ಲಿ ಟ್ರಸ್ಟ್ ನಿಂದ ಪ್ರಕಟಣೆಗೊಂಡ ಕೆಲವು ಪುಸ್ತಕಗಳನ್ನು ಕೊಳ್ಳಬಹುದು. ನಾವುಗಳು ಬೇಂದ್ರೆಯವರ ಸಾಹಿತ್ಯವನ್ನು ಕೇಳಿದಾಗ, ಅಲ್ಲಿಯ ಹಸನ್ಮುಖ ಸಿಬ್ಬಂದಿ ನಮ್ಮನ್ನು ಪಕ್ಕದಲ್ಲೇ ಇರುವ ಬೇಂದ್ರೆ ಯವರ ಮನೆಗೆ ಕರೆದೊಯ್ದರು.

ವರಕವಿಯ ಮನೆ ಹಾಗು ವಾಮನ ಬೇಂದ್ರೆ ( ಚಿತ್ರಕೃಪೆ : ನರಸಿಂಹ)

ವರಕವಿಯು ವಾಸಿಸುತ್ತಿದ್ದ ಮನೆ ಈಗಲೂ ಹಾಗೆಯೆ ಇದೆ. ನಮ್ಮ ಭಾಗ್ಯವೇನೂ ಎಂಬಂತೆ ಡಾ. ವಾಮನ ಬೇಂದ್ರೆಯವರು ಆ ದಿನ ಮನೆಯಲ್ಲಿಯೇ ಇದ್ದರು. ಈ ಇಳಿ ವಯಸ್ಸಿನಲ್ಲಿ ನಮ್ಮನ್ನು ತುಂಬಾ ಆತ್ಮೀಯವಾಗಿ ಸ್ವಾಗತಿಸಿ, ಚೂರು ಸಕ್ಕರೆಯನ್ನು ಬಾಯಿಗೆ ಇಟ್ಟು, ವರಾಂಡದ ಅಲಮೇರಗಳಲ್ಲಿ ಜೋಡಿಸಿಟ್ಟಿರುವ ಹಲವು ಪುರಸ್ಕಾರಗಳು, ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಜ್ಞಾನಪೀಠ ಪ್ರಶಸ್ತಿಗಳನ್ನ ಪರಿಚಯಿಸಿದರು. ಬೇಂದ್ರೆಯವರ ಸಾಹಿತ್ಯ ಇಲ್ಲಿ ಕೊಂಡು ಕೊಳ್ಳಲು ಲಭ್ಯ, ತುಂಬಾ ಆತ್ಮೀಯತೆಯಿಂದ ಮಾತನಾಡಿಸಿದ ವಾಮನ ಬೇಂದ್ರೆ ಯವರು ನಮ್ಮ ಕುಶಲೋಪರಿಗಳನ್ನು ವಿಚಾರಿಸಿಕೊಂಡರು. ಸುಮಾರು ಪುಸ್ತಕಗಳನ್ನು ಕೊಂಡುಕೊಂಡು ವಾಪಸ್ ಹೊರಟ ನಮಗೆ ವಾಮನ ಬೇಂದ್ರೆಯವರು ವರಕವಿಯವರ ಒಂದೊಂದು ಛಾಯಾಚಿತ್ರವನ್ನು ಉಡುಗೊರೆಯಾಗಿ ಕೊಟ್ಟರು. ಆ ಹಿರಿಯ ಚೇತನಕ್ಕೊಮ್ಮೆ ನಮಸ್ಕರಿಸಿ ಹೊರಟ ನಮಗೆ ಮನಸ್ಸಿನ ತುಂಬಾ ಬೇಂದ್ರೆಯವರೇ ತುಂಬಿಕೊಂಡಿದ್ದರು.

3 comments:

  1. ದೀಪು,ಧಾರವಾಡ ಪೇಡ ಸವಿದಂತೆ ಆಯಿತು.ವರಕವಿ ಬೇಂದ್ರೆ ಯವರ ನೆಚ್ಚಿನ ಸಾಧನಕೇರಿಗೆ ನಿಮ್ಮ ಭೇಟಿಯ ಬಗ್ಗೆ ನನಗೆ ಸಂತಸವಾಯಿತು.ಮತ್ತಷ್ಟು ಇಂತಹ ಸಾಹಸ ಕೈಗೊಳ್ಳಿ.

    ReplyDelete
  2. ಬಾಲು ಸರ್, ಧನ್ಯವಾದಗಳು. ವಾಮನ ಬೇಂದ್ರೆಯವರ ಹಸ್ತಾಕ್ಷರ ಪಡೆಯುವುದನ್ನ ಮರೆತಿರುವೆ... ಅದಕ್ಕಾಗಿ ಇನ್ನೊಂದು ಪ್ರವಾಸ ಮಾಡಲೇ ಬೇಕು :-)

    ReplyDelete
  3. ಸಾಹಸ !!! ನೀವು Joke ಮಾಡ್ತಾ ಇಲ್ಲವಷ್ಟೇ ?

    ReplyDelete