Monday, February 28, 2011

ಆಗುಂಬೆಯ ಅನ್ನಪೂರ್ಣೆ

ಚಂದು ತುಂಬಾ ದಿನಗಳಿಂದ ಹೇಳುತ್ತಿದ್ದ! ನೀವಿಬ್ಬರು ಅಲ್ಲಿಗೆ ಒಮ್ಮೆ ಹೋಗಿ ಬನ್ನಿ ಎಂದು !! ಚಂದು ಬಳಿ ಯಾವಾಗಲೋ ತೆಗೆದುಕೊಂಡ ಫೋನ್ ನಂಬರ್ ಕೂಡ ಇತ್ತು .. ಫೋನಾಯಿಸಿದಾಗ ಮಾತನಾಡಲು ಸಿಕ್ಕಿದ್ದು ಒಬ್ಬ ಪೋರಿ ! ನನ್ನ ಪರಿಚಯ ಮಾಡಿಕೊಂಡು ಅಜ್ಜಿ ಬ್ಯುಸಿಯಾಗಿದ್ದಾರೆ ಇನ್ನೊಮ್ಮೆ ಮಾಡಿ ಎಂದು ಉಲಿದಳು. ಮತ್ತೆ ಮಾಡಿದಾಗ ಸಿಕ್ಕವರೇ ಆಗುಂಬೆ ದೊಡ್ದಮನೆಯ ಕಸ್ತೂರಕ್ಕ. ತುಂಬಾ ಆತ್ಮೀಯವಾಗಿ ಮಾತನಾಡಿ, ನಾವುಗಳು ಯಾವತ್ತು ಬರುತ್ತೇವೆಂದು ತಿಳಿದುಕೊಂಡು, ಬರುವುದಕ್ಕೆ ಮುನ್ನ ಫೋನಾಯಿಸಿ ಎಂದು ಹೇಳಿ ಫೋನ್ ಇಟ್ಟರು.

ಆಗುಂಬೆಯ ದೊಡ್ಡಮನೆ

ಬೆಂಗಳೂರಿನಿಂದ ಡ್ರೈವ್ ಮಾಡಿಕೊಂಡು ಸುಸ್ತಾಗಿ ಆಗುಂಬೆ ತಲುಪಿದಾಗ ಮಧ್ಯಾನ್ಹವಾಗಿತ್ತು. ಹೋದ ಕೂಡಲೇ ಒಂದು ಆತ್ಮೀಯ ನಗೆ, ಕಷಾಯದ ಸ್ವಾಗತ, ಒಂದಷ್ಟು ಪರಿಚಯದ ಮಾತು. ಕಷಾಯವಂತು ತುಂಬಾ ಸೊಗಸಾಗಿತ್ತು. ನಾವಿಬ್ಬರು ಇನ್ನು ದಿನವೂ ಕಾಫಿ , ಟೀ ಬದಲಿಗೆ ಕಷಾಯವನ್ನೇ ಕುಡಿಯುವುದೆಂದು ತೀರ್ಮಾನಿಸಿದೆವು. ನಂತರ ಮನೆಯಲ್ಲಿ ಕಳೆದ ಮೂರು ದಿನಗಳೂ ಅವಿಸ್ಮರಣೀಯ!!! ಬೆಳಗ್ಗೆ ಏಳುವುದೇ ತಡ , ಕಷಾಯ ರೆಡಿ, ನಂತರ ತಿಂಡಿಯ ಸಮಯ, ಮಧ್ಯ ಒಂದು ಕಷಾಯ ಬ್ರೇಕ್ , ನಂತರ ಸವಿ ಸವಿಯ ಊಟ , ಹಾಗೆಯೆ ಅಡ್ಡಾಡಿಕೊಂಡು ಬಂದರೆ ಸಂಜೆಗೆ ಒಂದಷ್ಟು ತಿಂಡಿ, ಮತ್ತೆ ರಾತ್ರಿಯ ಭೋಜನ. ನೀರು ದೋಸೆ, ಪತ್ರೊಡೆ, ಮಜ್ಜಿಗೆ ಹುಳಿ, ಥರವಾರಿಯ ಚಟ್ನಿಗಳು, ಪಲ್ಯಗಳು ವಾಹ್!!! ದಿನವೂ ಕಸ್ತೂರಕ್ಕ ಬಗೆ ಬಗೆಯ ಭಕ್ಷ ಭೋಜ್ಯಗಳನ್ನು ಮಾಡಿ ತಿನ್ನಿಸುತ್ತಿದ್ದರು. ನನಗಂತೂ ದಿನವೂ ರಸಗವಳ.

ನಿಜ ಹೇಳಬೇಕೆಂದರೆ , ಈ ತರಹದ treatment ಒಂದು Homestayನಲ್ಲಿ ನಾನಂತು ನಿರೀಕ್ಷಿಸಿಯೇ ಇರಲಿಲ್ಲ, ನಾವಿಬ್ಬರು ಅಲ್ಲಿ ಮನೆಯವರೇ ಆಗಿಬಿಟ್ಟಿದ್ದೆವು. ದೊಡ್ಡಮನೆಯ ಕಸ್ತೂರಕ್ಕ ಹಲವಾರು ವರುಷಗಳಿಂದ ಪ್ರವಾಸಿಗರಿಗೆ / ಬಂದವರಿಗೆ ಪ್ರತಿಫಲದ ಅಪೇಕ್ಷೆಯೇ ಇಲ್ಲದೆ ಊಟ ಉಪಚಾರ ಮಾಡುತ್ತಾರೆ, ಕೆಲವೊಂದು ಸಂಧರ್ಭಗಳಲ್ಲಿ ಮಧ್ಯರಾತ್ರಿಯಲ್ಲೂ ಮಾಡಿದ್ದೂ ಉಂಟು. ಇದರ ಬೇರು ಹುಡುಕಿಕೊಂಡು ಹೊರಟಾಗ, ಕಸ್ತೂರಕ್ಕ ಹೇಳಿದ್ದು, ಒಮ್ಮೆ ಅವರು ಸಂಸಾರದೊಂದಿಗೆ ಪ್ರವಾಸ ಹೊರಟಾಗ, ಅನುಭವಿಸಿದ ತಾಪತ್ರಯಗಳು , ಕಷ್ಟಗಳನ್ನು ಕಂಡು, ಇವೆಲ್ಲ ಬೇರೆಯವರಿಗೂ ಬರದಿರಲಿ ಎಂದು ಆಗುಂಬೆಯಂತ ಗ್ರಾಮದಲ್ಲಿ (once ) ಈ ಕಾಯಕವನ್ನು ಮುಂದುವರೆಸಿದ್ದಾರೆ. ದೊಡ್ದಮನೆಯಲ್ಲಿ ಯಾವುದೇ ಹೊತ್ತಿನಲ್ಲಿ ಯಾರೇ ಹೋದರೂ, ಹಾಗೆಯೆ ಯಾರನ್ನು ಕಳುಹಿಸಿರದ ಹಲವಾರು ನಿದರ್ಶನಗಳಿವೆ, ಆಗುಂಬೆಯ ಕಗ್ಗಾಡಿನಲ್ಲಿ ಇದರ ಅವಶ್ಯಕತೆಯೂ ಕೂಡ ಇದೆ ಅನ್ನಿ!


ಕಸ್ತೂರಕ್ಕ

ಕಸ್ತೂರಕ್ಕನ ಮನೆಯಲ್ಲಿ ನಿತ್ಯ ದಾಸೋಹ. ಹಲವಾರು ಬಡ ಮಕ್ಕಳು ಮನೆಯಲ್ಲಿಯೇ ವಾರಾನ್ನ ಮಾಡಿಕೊಂಡು ಓದುತ್ತಿದ್ದಾರೆ. ಇನ್ನು ಹಲವಾರು ಮಕ್ಕಳು ಅಲ್ಲೇ ಹತ್ತಿರದ ಹಾಸ್ಟೆಲ್ ನಲ್ಲಿ ಇದ್ದುಕೊಂಡು ತಿಂಡಿ ಊಟಗಳಿಗೆ ಮನೆಗೆ ಬಂದು ಹೋಗುತ್ತಾರೆ. ಉದ್ದೇಶ ಇಷ್ಟೇ! ವಿಧ್ಯಾಭ್ಯಾಸ ಮಾಡಲು ಅನುಕೂಲ ಇರದಿರುವ ಸುತ್ತ ಮುತ್ತಲಿನ ಅನೇಕರಿಗೆ ಅನುಕೂಲ ಕಲ್ಪಿಸಬೇಕು, ಮಕ್ಕಳು ಓದಲು, ಬೆಳೆಯಲು ಅವಕಾಶ ಮಾಡಿ ಕೊಡಬೇಕು ಎನ್ನುವುದು. ಇಷ್ಟನ್ನು ಕೂಡ ಕಸ್ತೂರಕ್ಕ ಎಲೆ ಮರೆಯ ಕಾಯಿಯ ಹಾಗೆ ಕಾಯಕ ಮಾಡಿಕೊಂಡು ಹೋಗುತ್ತಿದ್ದಾರೆ. ಇದು ಅವರ ಮಾನವೀಯತೆಯ ಇನ್ನೊಂದು ಮುಖ.


ಕಸ್ತೂರಕ್ಕ ಮತ್ತು ಅಜ್ಜಿ

ಕಸ್ತೂರಕ್ಕನ ಈ ಕೆಲಸಕ್ಕೆ ಮನೆಯವರೆಲ್ಲರ ಸಹಕಾರವಿದೆ. ಕಸ್ತೂರಕ್ಕನ ತಾಯಿಯಿಂದ, ಮಗಳು, ಅಳಿಯ ಮತ್ತು ಮೊಮ್ಮಕ್ಕಳ ವರೆಗೂ ಎಲ್ಲರೂ ಕೆಲಸದಲ್ಲಿ ಕೈಜೋಡಿಸುತ್ತಾರೆ ಮತ್ತೆ ತುಂಬಾ ಶ್ರದ್ದೆಯಿಂದ ಮತ್ತು ಅತೀವ ಆಸಕ್ತಿಯಿಂದ ಮಾಡುತ್ತಾರೆ. ಕಸ್ತೂರಕ್ಕ ಮತ್ತು ಕುಟುಂಬಕ್ಕೆ ಭಗವಂತ ಇನ್ನು ಹೆಚ್ಚಿನ ಆಯುರಾರೋಗ್ಯಗಳನ್ನು ಕೊಟ್ಟು, ಈ ಕಾಯಕ ಮುಂದುವರೆಯಲಿ ಎಂದು ಹಾರೈಸುತ್ತೇನೆ.

4 comments:

 1. ಸರ್...

  ಕಸ್ತೂರಮ್ಮನವರೆಗೆ ಜೈ ಹೋ... !!

  ಇದನ್ನು ಓದಿ ಒಮ್ಮೆ ಅಲ್ಲಗೆ ಹೋಗಿ ಬರುವ ಆಸೆ ಆಗಿದೆ..
  ದಯವಿಟ್ಟು ಅಲ್ಲಿನ ವಿಳಾಸ..
  ದೂರವಾಣಿ ಸಂಖ್ಯೆ ಕೊಡುತ್ತೀರಾ?

  ಅಲ್ಲಿ ಉಳಿಯಲು ವ್ಯವಸ್ಥೆಯ ವಿವರಗಳು.. ಇತ್ಯಾದಿ..

  ನಮ್ಮಲ್ಲಿ ಆಸೆ ಹುಟ್ಟಿಸಿದ್ದಕ್ಕೆ ಧನ್ಯವಾದಗಳು...

  ReplyDelete
 2. ಧನ್ಯವಾದಗಳು, ನನ್ನ ಬ್ಲಾಗ್ ಗೆ ಭೇಟಿ ಕೊಟ್ಟದ್ದಕ್ಕೆ.
  ವಿಳಾಸ ಕಳುಹಿಸಿದ್ದೇನೆ.

  ReplyDelete
 3. ತು೦ಬ ಉಪಯುಕ್ತವಾದ ಮಾಹಿತಿ...ಪ್ರಕಾಶಣ್ಣ ಹೇಳಿದಹಾಗೆ ಸಾಧ್ಯವಾದ್ರೆ ವಿಳಾಸ,ದೂರವಾಣಿ ಸ೦ಖ್ಯೆ ಇತ್ಯಾದಿ ವಿವರಗಳನ್ನು ಕೊಟ್ಟರೆ ಇನ್ನೂ ಉಪಯುಕ್ತವಾದೀತು.ಅ೦ದಹಾಗೆ ಬ್ಲಾಗ್ ತು೦ಬ ಚೆನ್ನಾಗಿದೆ.ಮು೦ದುವರೆಸಿ.

  ReplyDelete
 4. ದಿವಾಸ್ : ಧನ್ಯವಾದಗಳು

  ವಿಳಾಸ .. ಆಗುಂಬೆ ಮೇನ್ ರೋಡ್ನಲ್ಲಿಯೇ ಮನೆ . ದೊಡ್ಡಮನೆ ಅಂದ್ರೆ ಯಾರು ಬೇಕಾದರು ತೋರಿಸ್ತಾರೆ
  ದೂರವಾಣಿ ನಂಬರ್ ಹಾಕಿದ್ದೇನೆ.

  ReplyDelete