ಬ್ಲಾಗಿನ ಪ್ರಪಂಚಕ್ಕೆ ಬಂದು ತುಂಬಾ
ದಿನವಾಯಿತು! ಕನ್ನಡದ ಬ್ಲಾಗು ಕೂಡ ಶುರು ಮಾಡಿ ಹಲವಾರು ದಿವಸಗಳೇ ಕಳೆದವು, ಹುಟ್ಟಿದ್ದು ಬೆಳೆದಿದ್ದು
ಎಲ್ಲಾ ಕನ್ನಡ ಮೀಡಿಯಂನಲ್ಲೆ ಅದರೂ ಬರೆಯಲು ಕುಳಿತರೆ ಲಹರಿ ಬರುತ್ತಿರಲಿಲ್ಲ, ಯೋಚನೆ ಮುಂದೆ
ಓದುತ್ತಿರಲಿಲ್ಲ. ಸ್ನೇಹಿತ, ಅಲ್ಲ
ಅಣ್ಣ! ಬಾಲುವಿನ ಒತ್ತಾಸೆ ತುಂಬಾ ದಿನದಿಂದಲೂ
ಇತ್ತು. ಹೀಗೆಯೇ ಒಂದು ದಿನ ಬರೆಯೋಣ ಎಂದು
ಕುಳಿತೆ, ವಿಷಯವೂ
ಸಿಕ್ಕಿತು. ನಾವು ನಾಲ್ಕು ಜನ
ಸ್ನೇಹಿತರು ಈ ಬಾರಿ ಮಾಡಿಸಿದ ಕನ್ನಡ
ರಾಜ್ಯೋತ್ಸವದ ಟಿ-ಶರ್ಟನ
ಕಥೆ.
ನಾವು ಸ್ನೇಹಿತರು ಈಗ ಕೆಲವು ವರ್ಷಗಳಿಂದ ಮಾಡಿಕೊಂಡು ಬಂದಿರುವ ವಾಡಿಕೆಯಂತೆ ಈ ಬಾರಿಯೂ ಕನ್ನಡ ರಾಜ್ಯೋತ್ಸವಕ್ಕೆಂದು ಟಿ-ಶರ್ಟ ಮಾಡಿಸಲು ಹೊರಟೆವು. ನನ್ನ ಹಾಗು ನರಸಿಂಹನ ಮಧ್ಯೆ ಈ ಬಾರಿಯ ವಿನ್ಯಾಸ ಹೇಗಿರಬೇಕೆಂದು ಭಾರಿ ಜಿಜ್ಞಾಸೆ
ಯೂ ಆಯಿತು.
ಕೊನೆಗೆ ಮುಂಭಾಗದಲ್ಲಿ ಹೊಯ್ಸಳ ರಾಜ್ಯವಂಶದ ಕುರುಹಾದ
ಸಳ ಮತ್ತು
ಹುಲಿಯನ್ನೂ ಹಾಗು ಹಿಂಭಾಗದಲ್ಲಿ ಸರ್ವಜ್ಞನ ವಚನಗಳನ್ನು ಮಾಡಿಸುವುದೆಂದು ಆಯಿತು ತೀರ್ಮಾನ! ನಂತರ ಶುರುವಾಯಿತು ಕಷ್ಟದ ಕೆಲಸ , ವಚನಗಳನ್ನು ಆಯ್ಕೆ
ಮಾಡುವುದು! ಹೇಳಿ ಕೇಳಿ ಸರ್ವಜ್ಞನ
ವಚನಗಳು, ಆಡು ಮಾತಿನಿಂದ ಪ್ರಚಲಿತ
ಗೊಂಡಿವೆ, ಹಲವಾರು ಸಂಶೋಧಕರು ಬರೆದಿದ್ದಾರೇನೋ ಸರಿ , ಆದರೆ ಮೂಲ ಯಾವುದು? ಯಾವುದು ಸರಿ ? ಎಂಬ
ಪ್ರಶ್ನೆಗಳು. ಗೆಳೆಯ ನರಸಿಂಹನ ಬಳಿ ಇರುವ ಪುಸ್ತಕಗಳು , ಹಾಗು ಇಂಟರ್ನೆಟ್ ನಲ್ಲಿ ಕೆಲವು ವಚನಗಳನ್ನು
ಇಬ್ಬರೂ ಸೇರಿ
ಹುದುಕಿದ್ದಾಯಿತು. ಹುಡುಕಿ ಆಯ್ಕೆ ಮಾಡಿದ್ದೂ ೧೫ , ಅದರಲ್ಲಿ ಕೊನೆ ಘಟ್ಟಕ್ಕೆ ಬಂದಿದ್ದು ೮ ಮಾತ್ರ.

ಅಂತೂ ಇಂತೂ
ಟಿ-ಶರ್ಟ್ ಮಾಡುವವನ ಬಳಿ ವಚನಗಳನ್ನು
ಕೊಟ್ಟರೆ, ಮೊದಲು ಮಾಡಿದ Sample T-shirt ಗಳಲ್ಲಿ ಕನ್ನಡದ ಕಗ್ಗೊಲೆಯೇ
ಆಗಿತ್ತು! ಹೇಳಿ ಕೇಳಿ ಅವನೊಬ್ಬ ತಮಿಳು ತಲೆ! ಇನ್ನೇನಾಗುತ್ತೆ
ಹೇಳಿ! ಹಲವಾರು ತಿದ್ದುಪಡಿಗಳ ನಂತರ ವಚನಗಳು ಚನ್ನಾಗಿ ಮೂಡಿ ಬಂದವು. ಇಷ್ಟರ ಮಧ್ಯೆ ಹೊಯ್ಸಳ Logo ಕೂಡ ಚನ್ನಾಗಿ ಮೂಡಿ ಬಂದಿತು. ಕೆಲವು ವಾರಗಳನಂತರ T-shirt ಗಳು
ಕೂಡ ಚನ್ನಾಗಿ ಮೂಡಿ ಬಂದವು. ಏನೋ ಒಂದು ಸಣ್ಣ ಸೇವೆ. ಏನಿಲ್ಲ ಅಂದರೂ ೪೫೦ ಜನ ಅದನ್ನು ಧರಿಸುತ್ತಾರೆ, ಒಂದಷ್ಟು ಜನ ಓದುತ್ತಾರಲ್ಲ ಅನ್ನೋ
ಭಾವನೆ. ಒಂದು ಸಾರ್ಥಕತೆ
ಯ ಭಾವ ! ಅಷ್ಟೇ ಸಾಕು!
ಆಯ್ದ ೮ ವಚನಗಳು ಇಲ್ಲಿವೆ
ಕೊಟ್ಟಿದ್ದು ತನಗೆ ಬಚ್ಚಿಟ್ಟದ್ದು ಪರರಿಗೆ
ಕೊಟ್ಟಿದ್ದು ಕೆಟ್ಟಿತೆನಬೇಡ ಮುಂದಕ್ಕೆ
ಕಟ್ಟಿಹುದು ಬುತ್ತಿ ಸರ್ವಜ್ಞ
ಹಿರಿಯ ನಾನೆನಬೇಡ ಗುರುವ ನಿಂದಿಸಬೇಡ
ಜರೆವವರ ಕೂಡ ಹಗೆಬೇಡ ಬಂಗಾರ
ದೆರವು ಬೇಡೆಂದ ಸರ್ವಜ್ಞ
ಆಡದಲೆ ಕೊಡುವವನು ರೂಢಿಯೊಳಗುತ್ತಮನು
ಆಡಿ ಕೊಡುವವನು ಮಧ್ಯಮನು ಅಧಮ ತಾ
ನಾಡಿ ಕೊಡದವನು ಸರ್ವಜ್ಞ
ಅನ್ನವನು ಇಕ್ಕುವುದು ನನ್ನಿಯನು ನುಡಿಯುವುದು
ತನ್ನಂತೆ ಪರರ ಬಗೆದೊಡೆ ಕೈಲಾಸ
ಬಿನ್ನಾಣವಕ್ಕು ಸರ್ವಜ್ಞ
ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ
ದುರ್ಜನರ ಸಂಗದೊಡನಾಟ ಬಚ್ಚಲಿನ
ರೊಜ್ಜಿನಂತಿಹುದು ಸರ್ವಜ್ಞ
ಚಿತ್ತವಿಲ್ಲದೆ ಗುಡಿಯ ಸುತ್ತಿದೊಡೆ ಫಲವೇನು ?
ಎತ್ತು ಗಾಣವನು ಹೊತ್ತು ತಾ ನಿತ್ಯದಲಿ
ಸುತ್ತಿಬಂದಂತೆ ಸರ್ವಜ್ಞ
ವೇಷಗಳ ಧರಿಸೇನು ? ದೇಶಗಳ ತಿರುಗೇನು ?
ದೋಷಗಳ ಹೇಳಿ ಫಲವೇನು ? ಮನಸಿನಾ
ಆಶೆ ಬಿಡದನಕ ಸರ್ವಜ್ಞ
ಜ್ಞಾನದಿಂದಲಿ ಇಹವು ಜ್ಞಾನದಿಂದಲಿ ಪರವು
ಜ್ಞಾನವಿಲ್ಲದಲೆ ಸಕಲವೂ ತನಗಿದ್ದು
ಹಾನಿ ಕಾಣಯ್ಯ ಸರ್ವಜ್ಞ