ಅಂದು ನವಂಬರ್ ೧ , ಶಿವು ಇನ್ನು ಮುಂದೆ ಪ್ರತಿ ವರ್ಷದ ರಾಜ್ಯೋತ್ಸವದ ದಿನದಂದು ಮನೆಯ ಮೇಲೆ ಬಾವುಟ ಹಾರಿಸಬೇಕೆಂದು ತೀರ್ಮಾನಿಸಿದ್ದ, ಆಗಿನ್ನೂ ಮದುವೆಯ ಹೊಸತು! ಗೌರಿ ಗಂಡನ ಕನ್ನಡಾಭಿಮಾನವನ್ನು ಕಂಡು ಹೆಮ್ಮೆ ಪಟ್ಟಿದ್ದಳು, ಇಬ್ಬರೂ ಸೇರಿ ಒಂದು ದೊಡ್ಡ ಗಳಕ್ಕೆಬಾವುಟ ಕಟ್ಟಿ, ಹಾರಿಸಿ ಸಿಹಿ ಹಂಚಿ ಸಂತೋಷ ಪಟ್ಟಿದ್ದರು. ವಿವಿಧ ಭಾರತಿಯಲ್ಲಿ " ಏರಿಸಿ ಹಾರಿಸಿ ಕನ್ನಡದ ಬಾವುಟ ......." ಮೊಳಗುತ್ತಿತ್ತು .
............... ............... ...................
ಅಂದು ಪ್ರಣವನ ಶಾಲೆಯಲ್ಲಿ ಒಂದು ಕಾರ್ಯಕ್ರಮ, ಬೇಗ ಎದ್ದು ಧಾವಂತ ಮಾಡಿಕೊಂಡು ಇಬ್ಬರೂ ಶಾಲೆಗೆ ಹೊರಟರು. ಶಹರದಲ್ಲಿ ಇಂಗ್ಲಿಷ್ ಶಾಲೆಗಳ ಭರಾಟೆ, ಹಳ್ಳಿಯಲ್ಲಿ ಈ ಖಾಸಗಿ ಶಾಲೆ ಶುರುವಾಗಿ ಇನ್ನೂ ಹೊಸತು, ಕಾರ್ಯಕ್ರಮ ಭಾರಿ ಚನ್ನಾಗಿಯೇ ನಡೆದಿತ್ತು, ಶಾಲೆಯ ಟ್ರಸ್ಟಿಗಳಲ್ಲಿ ಒಬ್ಬನಾದ ನಾಯ್ಡು ದಂಪತಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದ. ಶಾಲೆಯಲ್ಲಿ ಪ್ರಣವ ಗೌರಿ ಹೇಳಿಕೊಟ್ಟಂತೆ "ಏರಿಸಿ ಹಾರಿಸಿ ..........." ಗೀತೆಯನ್ನು ಅಚ್ಚುಕಟ್ಟಾಗಿ ಒಪ್ಪಿಸಿದ್ದ.
....................................................
ನಾಯ್ಡು ಆ ದಿನ ದೇಶಾವರಿ ನಗೆ ಬೀರುತ್ತ ಮನೆಗೆ ಬಂದ, "ಶಿವಣ್ಣ ನಾನು ಎಲೆಕ್ಷನ್ ಗೆ ನಿಂತಿದ್ದೇನೆ , ನಂಗೇ ನಿಮ್ದು ವೋಟು " ಹಿಂದೆ ಒಂದು ಭಾರಿ ದೊಡ್ಡ ಪಟಾಲಂ .. ಎದುರುಗಡೆ ಸುಪರ್ ಸ್ಟೋರ್ ನ ಮಾಲೀಕ ಜಾರ್ಜ್ ಹಾಗು ಹಿಂದುಗಡೆ ಬೀದಿಯ ಬಟ್ಟೆ ಅಂಗಡಿಯ ಮೆಹತ ಜೊತೆಗಿದ್ದರು. ಭಾರೀ ಅಬ್ಬರದ ಪ್ರಚಾರ , ಧೂಮ್ ಧಾಮ್ ಎಂದು ಎಲೆಕ್ಷನ್ ಮುಗಿದೇ ಹೋಯ್ತು, ನಾಯ್ಡು ಆರಿಸಿ ಬಂದದ್ದು ಆಯ್ತು.
ಶಾಲೆಯ ಮೈದಾನದಲ್ಲಿ ಆ ದಿನ ಸಂಭ್ರಮದ ಆಚರಣೆ!! ರಾಜ್ಯೋತ್ಸವದ್ದಾ ಅಥವಾ ನಾಯ್ಡುವಿನ ಗೆಲುವಿನ ಸಂಭ್ರಮದ ಆಚರಣೆಯೂ ಶಿವುವಿಗೆ ಗೊತ್ತಾಗಲಿಲ್ಲ. ನಮಗೆ ಅದರ ಉಸಾಬರಿ ಯಾಕೆ ಎಂದು ಶಿವಣ್ಣ ಹಾಗು ಗೌರಿ ಕಾರ್ಯಕ್ರಮಕ್ಕೆ ಗೈರು ! ನಾಯ್ಡುವಿನ ಭಾಷಣದಲ್ಲಿ ಕನ್ನಡದ ಕಗ್ಗೊಲೆ ಆಗುತ್ತಿತ್ತು. ಇಬ್ಬರೂ ಪ್ರಣವನೊಂದಿಗೆ, ಧ್ವಜ ಹಾರಿಸಿ ಒಳಗೆ ಬಂದು ಟಿವಿ ನೋಡುತ್ತ ಕುಳಿತರು. ಅಶ್ವತ್ಥ್ ಮತ್ತು ವೃಂದದಿಂದ "ಏರಿಸಿ ಹಾರಿಸಿ ......" ಸುಶ್ರಾವ್ಯವಾಗಿ ಕೇಳಿ ಬರುತ್ತಿತ್ತು .
............................................
ಹಳ್ಳಿಯು ಹೋಗಿ ಒಂದು ಯದ್ವಾತದ್ವ ಬೆಳೆದ ಬಡಾವಣೆ ಆಗಿತ್ತು, ಆ ದಿನ ಶಿವೂ ಗೊಣಗುತ್ತಿದ್ದ , ಮುದ್ದಾಗಿ ಇದ್ದ ಹೆಸರನ್ನು ತುಂಡಿಸಿದ್ದರು. ಬಡಾವಣೆಯ ಹೆಸರು " K D extension" ಅಂತ ಆಗಿತ್ತು , ಅನ್ಯಭಾಷಿಕರ ನಾಲಿಗೆ ಹೊರಳದೆ !! ಶಿವುಗೆ ಊರು ಬೇಜಾರಾಗಿತ್ತು!! ಸುತ್ತಲೂ ವಾಹನಗಳ ಭರಾಟೆ ! ಸ್ವಲ್ಪಹೊತ್ತು ಮಾತಾದೋಣ ಅಂದ್ರೆ ಅಕ್ಕ ಪಕ್ಕದ ಮನೆಯವರು ಹೊರಗೆ ಬರೋದೇ ಇಲ್ಲ!! ಸುತ್ತಾಡಿ ಬರೋಣ ಅಂತ ಹೊರಟರೆ , ಪರಿಚಯಸ್ಥರು ಸಿಗೋದೆ ಕಡಿಮೆ !! ರಾಮಣ್ಣ , ಪಾಲಾಕ್ಷಪ್ಪ ಊರು ಬಿಟ್ಟು ತುಂಬಾ ದಿನ ಆಗಿತ್ತು.. ತನ್ನ ಮನೆಯಲ್ಲೇ ಶಿವೂ ಪರಕೀಯನಾಗಿದ್ದ..........................................
ಪ್ರಣವನಿಗೆ ದೊಡ್ಡ ಕೆಲಸ! ಕೈ ತುಂಬಾ ಸಂಬಳ .. ಇಲ್ಲೇ ಬಂದು ಇದ್ದುಬಿಡು ಎಂದು ಕರೆಯುತ್ತಿದ್ದ, ಕೊನೆಗೂ ಶಿವೂ , ಗೌರಿ ತೀರ್ಮಾನಿಸಿದರು .. ಹೋಗೋಣ ಎಂದು ! ಎಲ್ಲವನ್ನು ಖಾಲಿ ಮಾಡಿಕೊಂಡು !!ಪ್ರಣವ ಎಲ್ಲವನ್ನು ಹೊರ ಗುತ್ತಿಗೆ ಕೊಟ್ಟು ಬಿಟ್ಟಿದ್ದ ... ಐದಾರು ಆಳುಗಳು ಬಂದು ಎಲ್ಲವನ್ನು ಲಾರಿ ಯಲ್ಲಿ ಹಾಕಿಕೊಂಡು ಭರ್... ಎಂದು ಹೋದರು.. ಆ ದಿನವೂ ನವೆಂಬರ್ ೧, ಅವತ್ತು ಶಿವು ಬಾವುಟ ಹಾರಿಸಲಿಲ್ಲ, ಪ್ರಣವನ ಕಾರಿನಲ್ಲಿ ಪಯಣ ಸಾಗುತ್ತಿತ್ತು ! ರೇಡಿಯೋ ನಲ್ಲಿ ಜಾಕಿಗಳದ್ದೆ ಭರಾಟೆ ! ಇಂಗ್ಲಿಷ್ ಮಿಶ್ರಿತ ಹರುಕು ಮುರುಕು ಕನ್ನಡದಲ್ಲಿ ಅವರ ಮಾತುಗಳು ನಾಗಲೋಟದಲ್ಲಿ ಸಾಗಿದ್ದವು!ಜಾಕಿಯು ಉಲಿದಳು, " ಯು ಅರ್ ಲಿಸೆನಿಂಗ್ ಟು ಬಿಂದಾಸ್ ಚಾನಲ್ ! ಟುಡೇ ಕನ್ನಡ ರಾಜ್ಯೋತ್ಸವ.... ಈಗ ಕೇಳಿ..ಏರಿಸಿ ... ಹಾರಿಸಿ.. ಕನ್ನಡದ ಬಾವುಟ.. "